ಧರ್ಮದ ಹೆಸರಿನಲ್ಲಿ ಇಂದು ಸ್ಪರ್ಧೆ ಹೆಚ್ಚುತ್ತಿದೆ. ಯಾರು ದೊಡ್ಡವರು, ಯಾರ ಧರ್ಮ ಶ್ರೇಷ್ಠ, ಯಾರ ಆಚರಣೆ ಹೆಚ್ಚು ವೈಭವಯುತ ಎಂಬ ಪೈಪೋಟಿಯ ನಡುವೆ ಮನುಷ್ಯ ಮಾತ್ರ ಎಲ್ಲೋ ಹಿಂದೆ ಸರಿಯುತ್ತಿದ್ದಾನೆ. ಮೆರವಣಿಗೆಗಳು, ಘೋಷಣೆಗಳು, ಸಾಮಾಜಿಕ ಮಾಧ್ಯಮಗಳ ಚರ್ಚೆಗಳ ನಡುವೆ ಹಸಿದವನ ಹೊಟ್ಟೆ, ಅನಾಥನ ಕಣ್ಣೀರು, ಬಡವನ ಬದುಕು ಮತ್ತು ನ್ಯಾಯಕ್ಕಾಗಿ ಕಾಯುತ್ತಿರುವ ಸಾಮಾನ್ಯ ಮನುಷ್ಯನ ನೋವು ಮಾತ್ರ ಹಾಗೆಯೇ ಉಳಿದಿದೆ.
ಇಂತಹ ಸಂದರ್ಭದಲ್ಲಿ ಈದ್ ಮಿಲಾದ್ ಉನ್ ನಬಿ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯಬೇಕೇ? ಅಥವಾ ಪ್ರವಾದಿ ಮಹಮ್ಮದ್ ಪೈಗಂಬರ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರು ಬದುಕಿ ತೋರಿಸಿದ ನ್ಯಾಯ, ಕರುಣೆ, ಸಮಾನತೆ, ಜ್ಞಾನ ಮತ್ತು ಮಾನವೀಯತೆಯ ದಾರಿಯನ್ನು ನೆನಪಿಸಿಕೊಳ್ಳಬೇಕೇ ಎಂಬುದು ನಮ್ಮ ಕಾಲದ ಮಹತ್ವದ ಚಿಂತನೆಯಾಗಿದೆ.
ಇತಿಹಾಸವನ್ನು ನೆನಪಿಸಿಕೊಳ್ಳುವುದು ಎಂದರೆ ಹಳೆಯ ಘಟನೆಗಳನ್ನು ಪುನರಾವರ್ತಿಸುವುದಲ್ಲ; ಅವು ವರ್ತಮಾನಕ್ಕೆ ನೀಡುವ ಪಾಠವನ್ನು ಅರಿಯುವುದು. ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಅವರ ಬದುಕು ಇದೇ ಸಂದೇಶವನ್ನು ನೀಡುತ್ತದೆ.
ಜ್ಞಾನದ ಮೂಲಕ ಬದಲಾವಣೆಯ ಪಯಣ
ಇಸ್ಲಾಮಿಕ್ ಪರಂಪರೆಯ ಪ್ರಕಾರ, ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಅವರು ಕ್ರಿ.ಶ. 571ರಲ್ಲಿ ಮಕ್ಕಾದಲ್ಲಿ ಜನಿಸಿದರು. ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜನರ ವಿಶ್ವಾಸ ಗಳಿಸಿ ‘ಅಲ್-ಅಮೀನ್’ ಎಂಬ ಗೌರವ ಪಡೆದರು.
ಸುಮಾರು ನಲವತ್ತು ವರ್ಷ ವಯಸ್ಸಿನಲ್ಲಿ ಹಿರಾ ಗುಹೆಯಲ್ಲಿ ಮೊದಲ ವಹೀ ದೊರೆಯಿತು. ‘ಇಕ್ರಾ’ ಎಂಬ ಜ್ಞಾನದ ಕರೆಯೊಂದಿಗೆ ಅವರ ಪ್ರವಾದಿತ್ವದ ಅಧ್ಯಾಯ ಆರಂಭವಾಯಿತು. ಸತ್ಯ, ನ್ಯಾಯ, ಕರುಣೆ, ದಾನ, ಅನಾಥರ ರಕ್ಷಣೆ, ಬಡವರ ಕಾಳಜಿ ಮತ್ತು ಮಾನವ ಘನತೆ ಅವರ ಬೋಧನೆಯ ಪ್ರಮುಖ ಅಂಶಗಳಾಗಿದ್ದವು.
ಆ ಕಾಲದ ಅರೇಬಿಯಾದಲ್ಲಿ ಬುಡಕಟ್ಟು ಪ್ರಭಾವ, ಅಸಮಾನತೆ, ಶೋಷಣೆ ಮತ್ತು ದುರ್ಬಲರ ಮೇಲಿನ ಅನ್ಯಾಯ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರವಾದಿಯ ಸಂದೇಶ ಧಾರ್ಮಿಕ ಬೋಧನೆಯಷ್ಟೇ ಅಲ್ಲದೆ ಸಾಮಾಜಿಕ ಪರಿವರ್ತನೆಯ ಧ್ವನಿಯಾಯಿತು.
ಸಹಬಾಳ್ವೆಯ ಸಮಾಜಕ್ಕೆ ಮಾದರಿ
ಕ್ರಿ.ಶ. 622ರ ಹಿಜ್ರಾ ಬಳಿಕ ಮದೀನಾದಲ್ಲಿ ವಿವಿಧ ಸಮುದಾಯಗಳ ನಡುವೆ ಸಾಮಾಜಿಕ ವ್ಯವಸ್ಥೆ ರೂಪಿಸುವಲ್ಲಿ ಪ್ರವಾದಿ ಪ್ರಮುಖ ಪಾತ್ರ ವಹಿಸಿದರು. ಮದೀನಾ ಒಪ್ಪಂದವು ವಿಭಿನ್ನ ಸಮುದಾಯಗಳ ಸಹಬಾಳ್ವೆ ಮತ್ತು ಪರಸ್ಪರ ಹೊಣೆಗಾರಿಕೆಯ ಮಹತ್ವವನ್ನು ಸಾರುತ್ತದೆ.
ಹುಡೈಬಿಯಾ ಒಪ್ಪಂದವು ಸಂಘರ್ಷದ ಸಂದರ್ಭದಲ್ಲಿಯೂ ತಾಳ್ಮೆ, ಸಂಧಾನ ಮತ್ತು ದೂರದೃಷ್ಟಿಗೆ ಮಹತ್ವವಿದೆ ಎಂಬುದನ್ನು ತೋರಿಸಿತು. ಕ್ರಿ.ಶ. 630ರಲ್ಲಿ ಮಕ್ಕಾ ವಿಜಯದ ಬಳಿಕ ಪ್ರತೀಕಾರಕ್ಕಿಂತ ಕ್ಷಮೆಗೆ ಆದ್ಯತೆ ನೀಡಿದ್ದು ಅಧಿಕಾರಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶ ನೀಡುತ್ತದೆ.
ಧರ್ಮದ ನಿಜವಾದ ಶಕ್ತಿ ಸೇವೆಯಲ್ಲಿ
ಇಂದಿನ ರಾಜಕೀಯ ಪೈಪೋಟಿಯಲ್ಲಿ ಧರ್ಮವನ್ನು ಮತಗಳ ಲೆಕ್ಕಾಚಾರಕ್ಕೆ ಬಳಸುವುದು, ಸಮುದಾಯಗಳ ನಡುವೆ ಅನುಮಾನ ಬಿತ್ತುವುದು ಅಪಾಯಕಾರಿ. ಧರ್ಮದ ನಿಜವಾದ ಶಕ್ತಿ ಪ್ರದರ್ಶನದಲ್ಲಲ್ಲ, ಸೇವೆಯಲ್ಲಿ ಕಾಣಬೇಕು. ಮೆರವಣಿಗೆ ಮತ್ತು ಅಲಂಕಾರದ ಜತೆಗೆ ಬಡ ವಿದ್ಯಾರ್ಥಿಗೆ ಪುಸ್ತಕ, ಹಸಿದವನಿಗೆ ಆಹಾರ, ಅನಾಥನಿಗೆ ನೆರವು ಹಾಗೂ ರೋಗಿಗೆ ಚಿಕಿತ್ಸೆಯ ಸಹಾಯ ದೊರೆತಾಗ ಆಚರಣೆಗೆ ನಿಜವಾದ ಸಾಮಾಜಿಕ ಅರ್ಥ ಬರುತ್ತದೆ.
ಯುವಕರು ತಂತ್ರಜ್ಞಾನವನ್ನು ದ್ವೇಷ ಹರಡುವುದಕ್ಕೆ ಬಳಸದೆ ಶಿಕ್ಷಣ, ರಕ್ತದಾನ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಗೆ ಬಳಸಬೇಕು. ಯಾವುದೇ ಮಾಹಿತಿಯನ್ನು ಹಂಚುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವ ವಿವೇಕವೂ ಬೆಳೆಸಿಕೊಳ್ಳಬೇಕು.
ಈದ್ ಮಿಲಾದ್ ಕೇವಲ ಒಂದು ದಿನದ ಸಂಭ್ರಮವಾಗದೆ, ನಮ್ಮ ಬದುಕನ್ನು ಪರಿಶೀಲಿಸುವ ಸಂದರ್ಭವಾಗಲಿ. ರಾಜಕೀಯದಲ್ಲಿ ನ್ಯಾಯ, ಧರ್ಮದಲ್ಲಿ ಮಾನವೀಯತೆ, ಸಮಾಜದಲ್ಲಿ ಸಮಾನತೆ ಮತ್ತು ಮಾತಿನಲ್ಲಿ ಸತ್ಯ ನೆಲೆಗೊಳ್ಳಲಿ.
ಈದ್ ಮಿಲಾದ್ನಲ್ಲಿ ಮನೆಗಳು ಮಾತ್ರ ಬೆಳಗದೆ, ಮನುಷ್ಯರ ಬದುಕು ಬೆಳಗಲಿ.
ದೀಪದ ಬೆಳಕಿಗಿಂತ ಬದುಕಿನ ಬೆಳಕು ಮುಖ್ಯ
ಈದ್ ಮಿಲಾದ್ ಎಂದರೆ ಬೀದಿಗಳಲ್ಲಿ ಬೆಳಗುವ ದೀಪಗಳಷ್ಟೇ ಅಲ್ಲ, ಕತ್ತಲಲ್ಲಿ ಬದುಕುತ್ತಿರುವ ಮನೆಯೊಳಗೆ ಹೊತ್ತಿಸುವ ಆಶೆಯ ದೀಪವೂ ಹೌದು. ಹಸಿದವನಿಗೆ ನೀಡಿದ ಒಂದು ತುತ್ತು, ಅನಾಥನ ತಲೆಯ ಮೇಲೆ ಇಟ್ಟ ಸಾಂತ್ವನದ ಕೈ ಹಾಗೂ ನೋವಿನಲ್ಲಿರುವವನಿಗೆ ನೀಡಿದ ಭರವಸೆಯ ಮಾತು ದೀರ್ಘಕಾಲ ಉಳಿಯುತ್ತವೆ. ಪೈಗಂಬರ್ (ಸ) ಅವರ ಜನ್ಮವನ್ನು ಸ್ಮರಿಸುವ ಈದ್ ಮಿಲಾದ್, ಮನುಷ್ಯನೊಳಗಿನ ಮಾನವೀಯತೆಯನ್ನು ಎಚ್ಚರಿಸುವ ಪವಿತ್ರ ನೆನಪಾಗಲಿ.

– ಸಿಕಂದರ ಎಂ. ಆರಿ, ವಕೀಲರು



