ಕ್ರಿ.ಶ. 571ರ ರಬೀಉಲ್ ಅವ್ವಲ್ ತಿಂಗಳ 9ನೇ ತಾರೀಖು ಸೋಮವಾರ. ಮಕ್ಕಾ ನಗರದಲ್ಲಿ ಅಬ್ದುಲ್ಲಾ ಮತ್ತು ಅಮೀನಾ ದಂಪತಿಯ ಪುತ್ರನಾಗಿ ಮುಹಮ್ಮದ್ (ಸ) ಜನಿಸಿದರು. ಮಗುವಿನ ಜನನದ ಸುದ್ದಿ ತಿಳಿದು ಓಡೋಡಿ ಬಂದ ದಾಸಿ ಬರ್ಕಾ, “ಸರದಾರರೇ, ಶುಭವಾಗಲಿ. ಅಮ್ಮಾ ಚಂದ್ರನಂತಹ ಸುಂದರ ಮಗುವಿಗೆ ಜನ್ಮ ನೀಡಿದ್ದಾರೆ” ಎಂದು ಸಂತಸದ ಸುದ್ದಿ ತಿಳಿಸಿದಳು. ಮಗುವನ್ನು ಕಂಡ ಅಬ್ದುಲ್ ಮುತ್ತಲಿಬ್ ಅವರ ಹೃದಯ ಆನಂದದಿಂದ ತುಂಬಿತು. ಅವರು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, “ಈ ಮಗುವನ್ನು ಸಂರಕ್ಷಿಸು” ಎಂದು ಪ್ರಾರ್ಥಿಸಿದರು.
ಆದರೆ ಈ ಮುದ್ದು ಬಾಲಕನ ಬದುಕಿನಲ್ಲಿ ಬಾಲ್ಯದಲ್ಲಿಯೇ ದುಃಖದ ಸರಮಾಲೆ ಆರಂಭವಾಯಿತು. ತಂದೆ ಅಬ್ದುಲ್ಲಾ ಅವರನ್ನು ಜನನಕ್ಕೂ ಮುನ್ನವೇ ಕಳೆದುಕೊಂಡಿದ್ದರು. ನಂತರ ತಾಯಿ ಅಮೀನಾ ಅವರನ್ನೂ ಕಳೆದುಕೊಂಡರು. ತಾಯಿಯ ಮೃತದೇಹವನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತ ಬಾಲಕ ಮುಹಮ್ಮದ್ (ಸ) ಅವರಿಗೆ ತಾತ ಅಬ್ದುಲ್ ಮುತ್ತಲಿಬ್ ಆಸರೆಯಾದರು. ಆದರೆ ವಿಧಿಯಾಟದಿಂದ ತಾತನನ್ನೂ ಕಳೆದುಕೊಂಡರು. ಹೀಗೆ ಮುಂದೆ ಜಗತ್ತಿನ ಅನಾಥರಿಗೆ ಆಸರೆಯಾಗಬೇಕಿದ್ದವರು ಸ್ವತಃ ಅನಾಥರ ನೋವನ್ನು ಅನುಭವಿಸಿ ಬೆಳೆದರು.
ಬಾಲ್ಯದಿಂದಲೇ ಮುಹಮ್ಮದ್ (ಸ) ಅವರ ಚಿಂತನೆ ವಿಶಿಷ್ಟವಾಗಿತ್ತು. ಆಡು-ಒಂಟೆಗಳನ್ನು ಮೇಯಿಸುತ್ತಿದ್ದಾಗಲೂ ಇತರ ಬಾಲಕರಂತೆ ಕೇವಲ ಆಟದಲ್ಲಿ ತಲ್ಲೀನರಾಗದೆ, ನೀಲಾಕಾಶ, ಎತ್ತರದ ಪರ್ವತಗಳು, ವಿಶಾಲ ಭೂಮಿ ಮತ್ತು ಪ್ರಕೃತಿಯ ವೈಚಿತ್ರ್ಯವನ್ನು ಗಮನಿಸುತ್ತಿದ್ದರು. “ಈ ಆಕಾಶವನ್ನು ಯಾರು ನಿರ್ಮಿಸಿದರು? ಈ ಪರ್ವತಗಳನ್ನು ಯಾರು ಸೃಷ್ಟಿಸಿದರು? ಮನುಷ್ಯನನ್ನು ಸೃಷ್ಟಿಸಿದವನು ಯಾರು?” ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡುತ್ತಿದ್ದವು. ಸೃಷ್ಟಿಯ ಹಿಂದಿರುವ ಮಹಾನ್ ಸೃಷ್ಟಿಕರ್ತನನ್ನು ಅರಿಯುವ ದಾಹ ಅವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.
ಯೌವನಕ್ಕೆ ಕಾಲಿಟ್ಟ ಮುಹಮ್ಮದ್ (ಸ) ಅವರು ಸತ್ಯ, ಪ್ರಾಮಾಣಿಕತೆ, ವಿವೇಕ, ಸಜ್ಜನಿಕೆ ಮತ್ತು ಉತ್ತಮ ನಡತೆಯಿಂದ ಜನರ ಗೌರವಕ್ಕೆ ಪಾತ್ರರಾದರು. ಏಕಾಂತವಾಸ ಮತ್ತು ಧ್ಯಾನ ಅವರಿಗೆ ಹೆಚ್ಚು ಪ್ರಿಯವಾಗತೊಡಗಿತು. ಜೀವನದ ಉದ್ದೇಶ, ಸೃಷ್ಟಿಯ ರಹಸ್ಯ ಮತ್ತು ಸೃಷ್ಟಿಕರ್ತನ ಕುರಿತು ಅವರು ಆಳವಾಗಿ ಚಿಂತಿಸುತ್ತಿದ್ದರು.
ಮಕ್ಕಾ ನಗರದ ಹೊರವಲಯದಲ್ಲಿರುವ ನೂರ್ ಪರ್ವತದ ಹಿರಾ ಗುಹೆ ಅವರ ಧ್ಯಾನಸ್ಥಳವಾಯಿತು. ಹಗಲಿರಲಿ, ರಾತ್ರಿಯಿರಲಿ, ಅವರು ಅಲ್ಲಿ ಸೃಷ್ಟಿಕರ್ತನ ಧ್ಯಾನ ಮತ್ತು ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಕೊನೆಗೆ ಕ್ರಿ.ಶ. 610ರಲ್ಲಿ ಅವರ ಜೀವನದ ಮಹತ್ವದ ಘಳಿಗೆ ಬಂದಿತು. ಜಿಬ್ರೀಲ್ (ಅ) ಅವರು ಅವರ ಬಳಿಗೆ ಆಗಮಿಸಿ “ಓದಿರಿ” ಎಂದು ಹೇಳಿದರು. “ನಾನು ಓದು ಬಲ್ಲವನಲ್ಲ” ಎಂದು ಮುಹಮ್ಮದ್ (ಸ) ಉತ್ತರಿಸಿದರು. ಬಳಿಕ ಪವಿತ್ರ ಕುರಾನಿನ ಸೂರ ಅಲ್-ಅಲಕ್‌ನ ಮೊದಲ ಐದು ವಚನಗಳು ಅವತೀರ್ಣವಾದವು.
“ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ ಓದಿರಿ. ಅವನು ಮಾನವನನ್ನು ಹೆಪ್ಪುಗಟ್ಟಿದ ರಕ್ತದ ಪಿಂಡದಿಂದ ಸೃಷ್ಟಿಸಿದನು…” ಎಂಬ ದಿವ್ಯವಾಣಿ ಜ್ಞಾನ ಮತ್ತು ಸತ್ಯದ ಹೊಸ ಬೆಳಕನ್ನು ಮಾನವಕುಲಕ್ಕೆ ನೀಡಿತು. ಇದರೊಂದಿಗೆ ಮುಹಮ್ಮದ್ (ಸ) ಅವರು ಅಂತಿಮ ಪ್ರವಾದಿಯಾಗಿ ತಮ್ಮ ಧರ್ಮಪ್ರಚಾರದ ಪವಿತ್ರ ಕಾರ್ಯವನ್ನು ಆರಂಭಿಸಿದರು.
ಆರಂಭದಲ್ಲಿ ಧರ್ಮಪ್ರಚಾರ ಗುಪ್ತವಾಗಿ ನಡೆಯಿತು. ನಂತರ ಅಲ್ಲಾಹನ ಏಕತ್ವದ ಸಂದೇಶವನ್ನು ಬಹಿರಂಗವಾಗಿ ಸಾರಲಾರಂಭಿಸಿದರು. “ಅಲ್ಲಾಹನಲ್ಲದೆ ಆರಾಧ್ಯನಿಲ್ಲ” ಎಂಬ ಸಂದೇಶದೊಂದಿಗೆ ನಮಾಝ್, ಉಪವಾಸ, ಝಕಾತ್ ಮತ್ತು ಹಜ್‌ನ ಮಹತ್ವವನ್ನು ಬೋಧಿಸಿದರು. ಆದರೆ ಅವರ ಸಂದೇಶ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿಲ್ಲ. ಸತ್ಯ, ನ್ಯಾಯ, ದಯೆ, ಕ್ಷಮೆ, ಸಹೋದರತ್ವ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಜೀವನದ ಆಧಾರವನ್ನಾಗಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಅನಾಥರು, ಬಡವರು, ದೀನರು ಮತ್ತು ಅಸಹಾಯಕರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದರು. ಅಹಂಕಾರ, ದ್ವೇಷ, ಅನ್ಯಾಯ ಮತ್ತು ಶೋಷಣೆಯಿಂದ ದೂರವಿದ್ದು, ಪರಸ್ಪರ ಪ್ರೀತಿ ಮತ್ತು ಕರುಣೆಯಿಂದ ಬದುಕುವಂತೆ ಬೋಧಿಸಿದರು. ಅವರ ಜೀವನವೇ ಅವರು ಸಾರಿದ ಸಂದೇಶದ ಪ್ರಾಯೋಗಿಕ ಮಾದರಿಯಾಗಿತ್ತು.
ಸಂಕಷ್ಟ ಬಂದಾಗ ಸಹನೆ, ಅಧಿಕಾರ ಸಿಕ್ಕಾಗ ವಿನಯ, ಸಂಪತ್ತು ದೊರೆತಾಗ ದಾನಶೀಲತೆ, ವಿರೋಧ ಎದುರಾದಾಗ ಕ್ಷಮೆ—ಇವೆಲ್ಲ ಮುಹಮ್ಮದ್ (ಸ) ಅವರ ಬದುಕಿನ ಮಹತ್ವದ ಗುಣಗಳಾಗಿದ್ದವು. ತಮ್ಮ ಅಂತಿಮ ದಿನಗಳಲ್ಲಿಯೂ ಬಡವರು ಮತ್ತು ದೀನರ ಬಗ್ಗೆ ಕಾಳಜಿ ವಹಿಸಿದರು. ತಮ್ಮಲ್ಲಿದ್ದ ಸಂಪತ್ತನ್ನು ದಾನ ಮಾಡಿದರು, ಗುಲಾಮರನ್ನು ಮುಕ್ತಗೊಳಿಸಿದರು.
ಕ್ರಿ.ಶ. 632ರಲ್ಲಿ 63ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದರು. ಆದರೆ ಅವರ ದೇಹ ಮಾತ್ರ ಇಹಲೋಕದಿಂದ ಮರೆಯಾಯಿತು, ಅವರ ಆದರ್ಶ ಮತ್ತು ಸಂದೇಶ ಇಂದಿಗೂ ಕೋಟ್ಯಂತರ ಜನರ ಬದುಕಿಗೆ ದಾರಿದೀಪವಾಗಿದೆ.
ಈದ್ ಮೀಲಾದ್ ಆಚರಣೆಯ ನಿಜವಾದ ಆಶಯವು ಕೇವಲ ಪ್ರವಾದಿಯವರ ಜನನವನ್ನು ಸ್ಮರಿಸುವುದರಲ್ಲಿ ಸೀಮಿತವಾಗಬಾರದು. ಅವರ ಜೀವನದ ಸಂದೇಶವನ್ನು ಅರಿತು, ಸತ್ಯ, ಕರುಣೆ, ಸಹನೆ, ಕ್ಷಮೆ, ಸರಳತೆ ಮತ್ತು ಮಾನವೀಯತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಅನಾಥರ ಕಣ್ಣೀರು ಒರೆಸೋಣ. ಬಡವರ ನೆರವಿಗೆ ನಿಲ್ಲೋಣ. ದ್ವೇಷದ ಬದಲು ಪ್ರೀತಿ, ಅನ್ಯಾಯದ ಬದಲು ನ್ಯಾಯ, ಅಹಂಕಾರದ ಬದಲು ವಿನಯ ಮತ್ತು ಹಿಂಸೆಯ ಬದಲು ಶಾಂತಿಯನ್ನು ಆಯ್ಕೆ ಮಾಡೋಣ. ಇದೇ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ನಮಗೆ ನೀಡುವ ಮಹತ್ತರ ಸಂದೇಶ.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶ ಎಲ್ಲರಿಗೂ ಸನ್ಮಾರ್ಗದ ದಾರಿದೀಪವಾಗಲಿ. ಈದ್ ಮೀಲಾದ್‌ನ ಪವಿತ್ರ ಸಂದರ್ಭದಲ್ಲಿ ಮಾನವೀಯತೆ, ಶಾಂತಿ ಮತ್ತು ಸಹೋದರತ್ವದ ಬೆಳಕು ನಮ್ಮೆಲ್ಲರ ಬದುಕಿನಲ್ಲಿ ಬೆಳಗಲಿ.
ಡಾ. ತಯಬಅಲಿ ಅ. ಹೊಂಬಳ
ಮಕ್ಕಳ ಸಾಹಿತಿ,
ಗದಗ



