ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಮಾನವೀಯತೆ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಜಾತ್ರೆಗಳು ಸಾರುತ್ತವೆ. ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಜಾತ್ರೆಗಳು ಸಾರುವ ಮೌಲ್ಯಗಳು ಹೊಸ ಸಮಾಜ ಕಟ್ಟಲು ಸಹಕಾರಿಯಾಗಲಿವೆ ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ 18 ವರ್ಷಗಳ ಬಳಿಕ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತ್ರೆಗಳು ಸಮಾಜದಲ್ಲಿ ರಚನಾತ್ಮಕ ಕಾರ್ಯಗಳಿಗೆ ಹಾಗೂ ಸೇವೆಯ ಮೂಲಕ ಸಾಮಾಜಿಕ ಬದಲಾವಣೆಗೆ ಅವಕಾಶ ಕಲ್ಪಿಸುವ ನೆಪವಾಗಿವೆ. ಆದರೆ ಪದ್ಧತಿ, ಸಂಸ್ಕೃತಿ ಒಂದೆಡೆಯಾದರೆ ಯುವಕರ ನಡೆ ಮತ್ತೊಂದೆಡೆ ಸಾಗುತ್ತಿರುವುದು ವಿಪರ್ಯಾಸ. ನಕಾರಾತ್ಮಕ ಮತ್ತು ಸಕಾರಾತ್ಮಕದ ನಡುವಿನ ಸೂಕ್ಷ್ಮ ಗೆರೆಯನ್ನು ಗಮನಿಸಿ ಯುವ ಸಮುದಾಯ ಮುನ್ನಡೆಯಬೇಕು. ಆಗ ಸಮಾಜದಲ್ಲಿ ಸಹಬಾಳ್ವೆ, ಭ್ರಾತೃತ್ವ ಹಾಗೂ ಒಗ್ಗಟ್ಟು ಬಲಗೊಳ್ಳಲಿದೆ ಎಂದರು.
ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸುವವರು ಇಂದು ಅಗತ್ಯವಾಗಿದ್ದಾರೆ. ಮತ್ತೊಬ್ಬರ ವಿಚಾರಧಾರೆಯನ್ನು ಒಪ್ಪಿ, ಸ್ವೀಕರಿಸಿ, ಗೌರವಿಸಿ ಮುನ್ನಡೆಯುವುದೇ ಭ್ರಾತೃತ್ವದ ಕಲ್ಪನೆ. ಇದನ್ನು ಸಮಾಜ ಸ್ವೀಕರಿಸಿದರೆ ಪ್ರಗತಿ ಸಾಧ್ಯ. ಭ್ರಾತೃತ್ವದ ಭಾವನೆ ವ್ಯಕ್ತಪಡಿಸಲು ಹಿಂಜರಿದರೆ ಸಮಾಜ ನಿರೀಕ್ಷಿಸಿದಷ್ಟು ಬದಲಾವಣೆ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಾತ್ರೆಗಳು ಸಾರುವ ಸಹೋದರತ್ವ, ಭ್ರಾತೃತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಆಚರಣೆಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷರಸಾಬ ಬಬರ್ಚಿ, ನಗರಸಭಾ ಸದಸ್ಯರಾದ ಮೆಹಬೂಬಸಾಬ ನದಾಫ್ ಹಾಗೂ ಬರಕತ್ ಅಲಿ ಮುಲ್ಲಾ ಮಾತನಾಡಿ, ಹರಿಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವ ಬೀರಿದೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಎಂತಹ ಕಾರ್ಯವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದಕ್ಕೆ ಜಾತ್ರೆ ನಿದರ್ಶನವಾಗಿದೆ ಎಂದರು.
ಪಂ. ಹೂಲಿ ಆಚಾರ್ಯ ಮಾತನಾಡಿ, ಮಹಾಭಾರತದಲ್ಲಿ ವೀರತ್ವ, ಬುದ್ಧಿ, ಧರ್ಮ, ಲೋಕನೀತಿ ಹಾಗೂ ವೇದಧರ್ಮದ ಸಾರವಿದೆ. ಮಹಾಭಾರತವನ್ನು ಓದುವುದರಿಂದ ಭಾವಶುದ್ಧಿಯಾಗುತ್ತದೆ. ಕರ್ಣನ ತ್ಯಾಗ, ಅರ್ಜುನನ ಶೌರ್ಯ, ಶ್ರೀಕೃಷ್ಣನ ಮಾರ್ಗದರ್ಶನ ಸೇರಿದಂತೆ ಕುರುಕ್ಷೇತ್ರ ಯುದ್ಧದ ಹಲವು ಪ್ರಸಂಗಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.
ಜಾತ್ರಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮೋಹನ ಕಮತರ, ಶಿವಯೋಗಿ ತೆಂಗಿನಕಾಯಿ, ಸಿದ್ದಣ್ಣ ಸಂಗನಾಳ, ಬಸಪ್ಪ ವಜ್ರಬಂಡಿ, ವಿನೋದ ಮೊರಬದ, ಸಂತೋಷ ಕಬಾಡರ, ಈರಣ್ಣ ಮೇಟಿ, ಮಂಜುನಾಥ, ಶೇಖಪ್ಪ ಸುನೀತ, ವೆಂಕಣ್ಣ ಈರಣ್ಣ ಹೇಮಾದ್ರಿ, ರವಿ ಹುಡೇದ, ಈಶಪ್ಪ ಸೇರಿದಂತೆ ಗಣ್ಯರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಶ್ರೀಮತಿ ವಿಜಯಲಕ್ಷ್ಮಿ ವೀರಶೆಟ್ಟರ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಸಂಸ್ಕೃತಿಯೇ ನಮ್ಮ ಹೆಮ್ಮೆ. ಜಾತ್ರೆಗಳು ಸಹಬಾಳ್ವೆಯ ಅವಕಾಶವನ್ನು ಒದಗಿಸುತ್ತವೆ. ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅಡಿಯಲ್ಲಿ ನಡೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಸಂಕಲ್ಪವನ್ನು ಜಾತ್ರೆಗಳ ಮೂಲಕ ಅನುಷ್ಠಾನಗೊಳಿಸಬೇಕು.
— ಕೆ.ಎಚ್. ಪಾಟೀಲ

