ಚಿಕ್ಕಬಳ್ಳಾಪುರ: ರಸ್ತೆ ಅಪಘಾತ ಎಂದು ದಾಖಲಾಗಿದ್ದ ಜಿಮ್ ಟ್ರೇನರ್ ದೇವಿಪ್ರಸಾದ್ ಸಾವಿನ ಪ್ರಕರಣ ಈಗ ಕೊಲೆ ಶಂಕೆಯತ್ತ ತಿರುಗಿದೆ. ಪೂರ್ವನಿಯೋಜಿತವಾಗಿ ಸುಪಾರಿ ನೀಡಿ ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬ ಆರೋಪಿಸಿದ್ದು, ಪ್ರಕರಣದ ಮರು ತನಿಖೆಗೆ ಚಿಕ್ಕಬಳ್ಳಾಪುರ ಎಸ್ಪಿಗೆ ದೂರು ನೀಡಿದೆ.
ನಾರಾಯಣಪುರ ನಿವಾಸಿ ದೇವಿಪ್ರಸಾದ್ ಮೇ 8ರಂದು ಸಂಬಂಧಿ ವಿಕ್ಕಿ ಹಾಗೂ ಸ್ನೇಹಿತ ಜೋಸ್ವಾ ಜೋಸೆಫ್ ಜೊತೆ ಬೈಕ್ನಲ್ಲಿ ಗುಡಿಬಂಡೆ ಕಡೆ ತೆರಳಿದ್ದ ವೇಳೆ ಸೆಟ್ದಿನ್ನೆ ಸಮೀಪ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅವರೊಂದಿಗೆ ತೆರಳಿದ್ದ ಇಬ್ಬರ ಹೇಳಿಕೆಗಳು ಹಾಗೂ ಘಟನೆ ನಡೆದ ಸಂದರ್ಭ ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಕುಟುಂಬ ಹೇಳಿದೆ.
ಕುಟುಂಬದ ಆರೋಪದಂತೆ, ದೇವಿಪ್ರಸಾದ್ಗೆ ಜಿಮ್ಗೆ ಬರುತ್ತಿದ್ದ ಉದ್ಯಮಿ ಹಾಗೂ ಮಾಡೆಲ್ ಆಗಿರುವ ವಿವಾಹಿತ ಮಹಿಳೆಯೊಂದಿಗೆ ಆಪ್ತ ಸಂಬಂಧವಿತ್ತು. ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದು, ಖಾಸಗಿ ವಿಡಿಯೋಗಳು ದೇವಿಪ್ರಸಾದ್ ಮೊಬೈಲ್ನಲ್ಲಿ ಇದ್ದವು. ಇದೇ ವಿಚಾರಕ್ಕೆ ಆ ಮಹಿಳೆ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದಲ್ಲದೆ, ಸಂಬಂಧಿ ವಿಕ್ಕಿ ದೇವಿಪ್ರಸಾದ್ ಮನೆಯಲ್ಲಿ ಇದ್ದ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ ಎಂಬ ಆರೋಪವನ್ನೂ ಕುಟುಂಬ ಮಾಡಿದೆ. ಪ್ರಕರಣದ ಹಿಂದೆ ದೊಡ್ಡ ಸಂಚು ಇರಬಹುದೆಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಅಪಘಾತ ಮತ್ತು ಕೊಲೆ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



