HomeCrime Newsಸರ್ಕಾರಿ ಉದ್ಯೋಗಕ್ಕಾಗಿ ತಾಯಿಯ ಹತ್ಯೆ: 7 ಲಕ್ಷ ರೂ. ಸುಪಾರಿ ಕೊಟ್ಟ ಮಗಳು ಸೇರಿ 7...

ಸರ್ಕಾರಿ ಉದ್ಯೋಗಕ್ಕಾಗಿ ತಾಯಿಯ ಹತ್ಯೆ: 7 ಲಕ್ಷ ರೂ. ಸುಪಾರಿ ಕೊಟ್ಟ ಮಗಳು ಸೇರಿ 7 ಮಂದಿ ಅರೆಸ್ಟ್!

For Dai;y Updates Join Our whatsapp Group

ಜೈಪುರ: ಆಸ್ತಿ ಹಾಗೂ ಸರ್ಕಾರಿ ಉದ್ಯೋಗದ ಆಸೆಗೆ 7 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಹತ್ಯೆ ಮಾಡಿಸಿದ ಬೆಚ್ಚಿಬೀಳಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಪುತ್ರಿ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಧಿತೆ ಆಯುಷಿ ಶರ್ಮಾ (23) ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಹಾಗೂ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಬಳಿಕ ಬಾಡಿಗೆ ಹಂತಕರಿಗೆ 7 ಲಕ್ಷ ರೂ. ಸುಪಾರಿ ನೀಡಿ, ತನ್ನ ತಾಯಿ ನೀರಜ್ ಶರ್ಮಾ ಅವರನ್ನು ಅಪಘಾತದಂತೆ ತೋರಿಸಿ ಹತ್ಯೆ ಮಾಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (LDC) ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ತಮ್ಮ ಮಗನನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಪ್ರತಾಪ್ ನಗರ ಸಮೀಪ ಅತಿ ವೇಗದಲ್ಲಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅವರು ಸುಮಾರು 100 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಭಾವಿಸಲಾಗಿತ್ತು. ಆದರೆ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಸಂಪೂರ್ಣ ಸಂಚು ಬಯಲಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮೊದಲಿಗೆ ಬಾಡಿಗೆಗೆ ಪಡೆದ ಥಾರ್ ಎಸ್‌ಯುವಿ ಮೂಲಕ ನೀರಜ್ ಅವರ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ಆ ಯೋಜನೆ ವಿಫಲವಾದ ಬಳಿಕ ಸ್ಕಾರ್ಪಿಯೋ ವಾಹನ ಬಳಸಿಕೊಂಡು ಅಂತಿಮವಾಗಿ ದಾಳಿ ನಡೆಸಿದ್ದರು.

ಘಟನೆ ನಡೆದ ದಿನ ನೀರಜ್ ಅವರ ಸ್ಥಳದ ಮಾಹಿತಿಯನ್ನು ಒಬ್ಬ ಆರೋಪಿ ನೀಡುತ್ತಿದ್ದರೆ, ಮತ್ತೊಬ್ಬ ಬೈಕ್‌ನಲ್ಲಿ ಸಮೀಪದಲ್ಲೇ ಕಾದಿದ್ದ. ಸ್ಕಾರ್ಪಿಯೋ ಚಾಲನೆ ಮಾಡುತ್ತಿದ್ದ ಆರೋಪಿ ನೀರಜ್ ಅವರಿಗೆ ಡಿಕ್ಕಿ ಹೊಡೆದ ಬಳಿಕ, ಆರೋಪಿಗಳು ವಾಹನ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದರು.

ತನಿಖೆ ವೇಳೆ ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕ ಅನುಕಂಪದ ಆಧಾರದ ಮೇಲೆ ಅವರಿಗೆ ಎಲ್‌ಡಿಸಿ ಹುದ್ದೆ ದೊರೆತಿತ್ತು ಎಂಬುದು ತಿಳಿದುಬಂದಿದೆ. ಆ ಉದ್ಯೋಗ ತನ್ನ ಪಾಲಾಗಬೇಕೆಂದು ಆಯುಷಿ ಬಯಸಿದ್ದಳು. ಅಲ್ಲದೆ ಕಳೆದ ಎರಡು-ಮೂರು ವರ್ಷಗಳಿಂದ ತಾಯಿ-ಮಗಳ ನಡುವೆ ಆಸ್ತಿ ವಿಚಾರದಲ್ಲೂ ಭಿನ್ನಾಭಿಪ್ರಾಯವಿತ್ತು. ಇದೇ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಯುಷಿ ಶರ್ಮಾ, ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಹಾಗೂ ರೋಹಿತ್ ಜಾತವ್ ಅವರನ್ನು ಬಂಧಿಸಲಾಗಿದೆ. ಪ್ರಮುಖ ಸಂಚುಕೋರ ಬಲರಾಮ್ ಅಲಿಯಾಸ್ ರವಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img