ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಐವರು ಅವಶೇಷಗಳಡಿ ಸಿಲುಕಿದ್ದು, ಅವರಲ್ಲಿ ಒಬ್ಬರು ಸುರಕ್ಷಿತವಾಗಿ ಹೊರಬಂದಿದ್ದಾರೆ. ರಕ್ಷಣಾ ಸಿಬ್ಬಂದಿ ಇದುವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ದುರಂತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಸ್ಥಳೀಯ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಹಾಗೂ ಅರುಣಾಚಲ ಪ್ರದೇಶ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ಮುಂದುವರಿದಿದೆ.
ಇನ್ನೊಂದೆಡೆ, ನಿರಂತರ ಮಳೆಯಿಂದ ತಿರಪ್ ಜಿಲ್ಲೆಯ ಖೋನ್ಸಾ–ಲಾಜು ರಸ್ತೆಯ ಅಂಚೆ ಕಚೇರಿ ಸಮೀಪ ಸುಮಾರು 110 ಮೀಟರ್ ರಸ್ತೆ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಭಾರೀ ಮಳೆ, ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿತ್ತು. ಮುಂದಿನ ಕೆಲವು ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.



