ಬೆಂಗಳೂರು: ಬಸವ ಮಂಟಪ ಕೃತಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ವಿಡಿಯೋ ಬಿಡುಗಡೆ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ಇತ್ತೀಚಿನ ಕೃತಿಯಲ್ಲಿ ಏನಿದೆ ಎಂಬುದನ್ನು ತಿಳಿಯದೇ ಕೆಲವರು ಆರೋಪ ಮಾಡುತ್ತಿದ್ದಾರೆ. ಬಸವಣ್ಣರಿಗೆ ಮಸಿ ಬಳಿಯುವ ಕೆಲಸ ಮಾಡಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಬೇಕಿದ್ದರೆ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಅವರು ಹೇಳಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ರವಿ ಹಂಜ್, ಕೆಲವೇ ಕೆಲವು ಜನರ ತಂತ್ರಕ್ಕೆ ಮರುಳಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ನಗು ಬರುತ್ತಿದೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಅವರ ಕುತಂತ್ರಕ್ಕೆ ಮರುಳಾಗಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಾಕಷ್ಟು ಜನರು ಮುಗ್ಧರಾಗಿದ್ದಾರೆ ಎಂಬ ಭಾವನೆ ಮೂಡಿದ್ದು, ಅವರ ಬಗ್ಗೆ ಮರುಕ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ತಮ್ಮ ತಲೆಗೆ ಫತ್ವಾ ಹೊರಡಿಸಬೇಕು, ಕೈಕಾಲು ಮುರಿಯಬೇಕು ಎಂದು ಹೇಳಿದವರ ಬಗ್ಗೆಯೂ ದ್ವೇಷವಿಲ್ಲ. ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ ಆರೋಪಗಳಿಗೆ ಮರುಳಾಗುತ್ತಿರುವವರ ಬಗ್ಗೆ ವಿಷಾದ ಮತ್ತು ಕರುಣೆ ಇದೆ ಎಂದು ಅವರು ಹೇಳಿದ್ದಾರೆ.
ಬಸವಣ್ಣರ ವಚನದ ಉಲ್ಲೇಖ ತಿರುಚಲಾಗಿದೆ ಎಂಬ ಆರೋಪ
‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಬಸವಣ್ಣರ ವಚನದ ಉಲ್ಲೇಖ ಮಾಡಿರುವ ರವಿ ಹಂಜ್, ತಮ್ಮ ಕೃತಿಯಲ್ಲಿ ಬಸವಣ್ಣರ ಕುರಿತು ಕೆಲವು ಐತಿಹಾಸಿಕ ವಿಚಾರಗಳನ್ನು ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದಾರೆ.
ಬಿಜ್ಜಳನ ಖಜಾನೆಯನ್ನು ಬಳಸಿಕೊಂಡು ಜಂಗಮರಿಗೆ ಬಸವಣ್ಣ ದಾಸೋಹ ಮಾಡಿದ್ದಾರೆ ಹಾಗೂ ಬಿಜ್ಜಳನನ್ನು ಕೊಲ್ಲಿಸಿದ್ದಾರೆ ಎಂಬ ಆರೋಪಗಳ ಕುರಿತು ತಾವು ಪುಸ್ತಕದಲ್ಲಿ ಉಲ್ಲೇಖಿಸಿದ್ದಾಗಿ ಹೇಳಿದ್ದಾರೆ. ಆದರೆ, ತಮ್ಮ ಮಾತುಗಳನ್ನು ಕುತಂತ್ರಿಗಳು ತಮಗೆ ಬೇಕಾದ ರೀತಿಯಲ್ಲಿ ತುಂಡರಿಸಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುವುದಾಗಿ ಹೇಳಿಕೆ
ತಮ್ಮ ವಿರುದ್ಧ ಪ್ರಕರಣ ದಾಖಲಿಸಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಲಾಗಿದೆ ಎಂದು ರವಿ ಹಂಜ್ ಆರೋಪಿಸಿದ್ದಾರೆ. ತಾವು ಸತ್ಯವಂತರು ಮತ್ತು ಪ್ರಾಮಾಣಿಕರಾಗಿದ್ದು, ಯಾವುದೇ ಆಮಿಷಗಳಿಗೆ ಮಣಿಯುವುದಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ತಮ್ಮ ಕೃತಿಯಲ್ಲಿ ಯಾವುದೇ ಅವಹೇಳನಕಾರಿ ಅಂಶಗಳಿಲ್ಲ. ಬಸವರಾಜದೇವ ರಗಳೆ, ಬಸವಪುರಾಣ ಮತ್ತು ಗೆಜೆಟಿಯರ್ಗಳಲ್ಲಿರುವ ವಿಚಾರಗಳನ್ನು ಆಧರಿಸಿ ಪುಸ್ತಕದಲ್ಲಿ ಬರೆಯಲಾಗಿದೆ. ತಮ್ಮದೇ ಆದ ಕಲ್ಪನೆಯಿಂದ ಯಾವುದೇ ವಿಚಾರಗಳನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದಕ್ಕೆ ಸರ್ಕಾರಿ ಪ್ರಾಯೋಜಿತ ಕ್ರಮಗಳೇ ಕಾರಣ ಹೊರತು ತಾವು ಅಲ್ಲ ಎಂದು ಹೇಳಿರುವ ರವಿ ಹಂಜ್, ಅರವಿಂದ ಜತ್ತಿ ಸೇರಿದಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ತಮ್ಮ ಪುಸ್ತಕದ ಪರಿವಿಡಿಯಲ್ಲಿಯೇ ಕೃತಿಯಲ್ಲಿ ಏನಿದೆ ಎಂಬುದನ್ನು ವಿವರಿಸಲಾಗಿದೆ ಎಂದು ಹೇಳಿರುವ ಅವರು, ಪುಸ್ತಕದ ವಿಚಾರಗಳನ್ನು ತಿಳಿದುಕೊಳ್ಳದೇ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತಮ್ಮ ವಿಡಿಯೋದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.









