ದೊಡ್ಡಬಳ್ಳಾಪುರ: ತಾಲೂಕಿನ 11ನೇ ಮೈಲಿ ಬಳಿ ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಅತಿ ವೇಗದಲ್ಲಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಕ್ಷಣಾರ್ಧದಲ್ಲೇ ಹೊತ್ತಿ ಉರಿದರೆ, ಅದರ ಜ್ವಾಲೆ ಪಕ್ಕದಲ್ಲಿದ್ದ ಹಾಲಿನ ಟ್ಯಾಂಕರ್ಗೂ ವ್ಯಾಪಿಸಿ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ.
ಅಪಘಾತ ಸಂಭವಿಸಿದ ಕ್ಷಣದಲ್ಲೇ ಚಾಲಕರು ಲಾರಿಯಿಂದ ಹೊರಗೆ ಹಾರಿದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅವಘಡದಲ್ಲಿ ಎರಡೂ ಲಾರಿಗಳು ಬಹುತೇಕ ಸಂಪೂರ್ಣ ಸುಟ್ಟುಹೋಗಿವೆ. ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



