HomeSports Newsಏಕದಿನ ಕ್ರಿಕೆಟ್ ನಿಯಮಗಳಲ್ಲಿ ಬಿಗ್ ಚೇಂಜ್: ಪಂದ್ಯವನ್ನು 50 ಓವರ್ʼನಿಂದ 40 ಓವರ್ʼಗೆ ಇಳಿಸುವ ಚಿಂತನೆ!

ಏಕದಿನ ಕ್ರಿಕೆಟ್ ನಿಯಮಗಳಲ್ಲಿ ಬಿಗ್ ಚೇಂಜ್: ಪಂದ್ಯವನ್ನು 50 ಓವರ್ʼನಿಂದ 40 ಓವರ್ʼಗೆ ಇಳಿಸುವ ಚಿಂತನೆ!

For Dai;y Updates Join Our whatsapp Group

ನವದೆಹಲಿ: ಟಿ20 ಕ್ರಿಕೆಟ್‌ನ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು, ಏಕದಿನ ಕ್ರಿಕೆಟ್‌ನ ಭವಿಷ್ಯ ಉಳಿಸಿಕೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಬದಲಾವಣೆಗಳ ಬಗ್ಗೆ ಚಿಂತನೆ ನಡೆಸುತ್ತಿದೆ.

ಅದರ ಭಾಗವಾಗಿ, ಸದ್ಯದ 50 ಓವರ್‌ಗಳ ಏಕದಿನ ಪಂದ್ಯಗಳನ್ನು 40 ಓವರ್‌ಗಳಿಗೆ ಇಳಿಸುವ ಪ್ರಸ್ತಾವನೆ ಐಸಿಸಿ ಮುಂದಿದೆ. ಕ್ರಿಕೆಟ್‌ನ ಭವಿಷ್ಯದ ಕಾರ್ಯತಂತ್ರ ಕುರಿತು ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ (McKinsey) ನೇತೃತ್ವದಲ್ಲಿ ಐಸಿಸಿ ಇತ್ತೀಚೆಗೆ ಸಮಗ್ರ ಪರಿಶೀಲನೆ ನಡೆಸಿದೆ. ಈ ವೇಳೆ, ಏಕದಿನ ಕ್ರಿಕೆಟ್‌ಗೆ ಹೊಸ ಚೈತನ್ಯ ತುಂಬಬೇಕಾದರೆ ಓವರ್‌ಗಳ ಸಂಖ್ಯೆಯಲ್ಲಿ ಬದಲಾವಣೆ ಅಗತ್ಯ ಎಂದು ಸಲಹೆ ನೀಡಲಾಗಿದೆ.

40 ಓವರ್‌ಗಳ ಪ್ರಸ್ತಾವನೆಗೆ ಪ್ರಮುಖ ಕಾರಣಗಳು

ಪ್ರಸ್ತುತ ಟಿ20 ಪಂದ್ಯಗಳು ಕೇವಲ 3 ರಿಂದ 4 ಗಂಟೆಗಳಲ್ಲೇ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 8 ಗಂಟೆಗಳ ಕಾಲ ನಡೆಯುವ ಏಕದಿನ ಪಂದ್ಯಗಳತ್ತ ಪ್ರೇಕ್ಷಕರ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಂದ್ಯವನ್ನು 40 ಓವರ್‌ಗಳಿಗೆ ಸೀಮಿತಗೊಳಿಸಿದರೆ ಅದರ ಅವಧಿ ಸುಮಾರು 6 ಗಂಟೆಗಳಿಗೆ ಇಳಿಯಲಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನೊಂದೆಡೆ, ಏಕದಿನ ಕ್ರಿಕೆಟ್‌ನಲ್ಲಿ 15ರಿಂದ 40ನೇ ಓವರ್‌ಗಳ ನಡುವಿನ ಆಟ ಹೆಚ್ಚು ರೋಚಕವಾಗಿರುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಹೆಚ್ಚಾಗಿ ಸಿಂಗಲ್ಸ್ ಮತ್ತು ಡಬಲ್ಸ್‌ಗೆ ಒತ್ತು ನೀಡಲಾಗುವುದರಿಂದ ಪಂದ್ಯದಲ್ಲಿ ರೋಮಾಂಚನ ಕಡಿಮೆಯಾಗುತ್ತದೆ. ಓವರ್‌ಗಳ ಕಡಿತದಿಂದ ಮೊದಲಿನಿಂದ ಕೊನೆಯವರೆಗೂ ಪಂದ್ಯವನ್ನು ಹೆಚ್ಚು ಆಕರ್ಷಕವಾಗಿಡುವ ಉದ್ದೇಶ ಹೊಂದಲಾಗಿದೆ.

ಇದರ ಜೊತೆಗೆ, ನಿರಂತರ ಕ್ರಿಕೆಟ್ ವೇಳಾಪಟ್ಟಿಯಿಂದ ಆಟಗಾರರ ಮೇಲೆ ಉಂಟಾಗುತ್ತಿರುವ ದೈಹಿಕ ಒತ್ತಡ ಹಾಗೂ ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಬದಲಾವಣೆ ಸಹಕಾರಿಯಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಐಸಿಸಿ ಮುಂದಿರುವ ಪ್ರಮುಖ ಶಿಫಾರಸುಗಳು

ಮೆಕಿನ್ಸೆ ಸಂಸ್ಥೆ ಐಸಿಸಿಗೆ ಹಲವು ಮಹತ್ವದ ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾಗಿ 50 ಓವರ್‌ಗಳ ಬದಲಿಗೆ 40 ಓವರ್‌ಗಳ ಏಕದಿನ ಪಂದ್ಯಗಳನ್ನು ಪರಿಚಯಿಸುವುದು, ಏಕದಿನ ವಿಶ್ವಕಪ್‌ಗೆ 18 ತಿಂಗಳ ಮುಂಚೆಯಷ್ಟೇ ಏಕದಿನ ಸರಣಿಗಳನ್ನು ಆಯೋಜಿಸುವುದು,

ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಗಳಿಗೆ ಪ್ರತ್ಯೇಕ ವೇಳಾಪಟ್ಟಿಯನ್ನು ರೂಪಿಸುವುದು ಮತ್ತು ಏಷ್ಯಾಕಪ್ ಮಾದರಿಯಲ್ಲಿ ವಿವಿಧ ಖಂಡಗಳಲ್ಲಿ ಕಾಂಟಿನೆಂಟಲ್ ಟೂರ್ನಿಗಳು ಹಾಗೂ ತ್ರಿಕೋನ ಸರಣಿಗಳನ್ನು ಉತ್ತೇಜಿಸುವುದು ಸೇರಿವೆ.

2027 ವಿಶ್ವಕಪ್‌ವರೆಗೆ ಯಾವುದೇ ಬದಲಾವಣೆ ಇಲ್ಲ

ಈ ಪ್ರಸ್ತಾವನೆಗಳು ಚರ್ಚೆಯ ಹಂತದಲ್ಲಿದ್ದು, 2027ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ಯಾವುದೇ ಹೊಸ ನಿಯಮ ಜಾರಿಗೆ ಬರುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಸ್ತುತ ಜಾರಿಯಲ್ಲಿರುವ ‘ಫ್ಯೂಚರ್ ಟೂರ್ಸ್ ಪ್ರೋಗ್ರಾಂ’ (FTP) ವೇಳಾಪಟ್ಟಿಯನ್ನು ಪರಿಶೀಲಿಸಿದ ಬಳಿಕವೇ ಐಸಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಸದ್ಯ ಲಭ್ಯವಿರುವ ಮಾಹಿತಿಯಂತೆ, ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 12 ಪೂರ್ಣ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಮುಂದೆ ಈ ಪ್ರಸ್ತಾವನೆಯನ್ನು ಚರ್ಚೆಗೆ ಇಡಲಾಗುತ್ತದೆ. ಸಭೆಯ ಬಳಿಕವೇ ಏಕದಿನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಅವರೆಗೆ, 2027ರ ಏಕದಿನ ವಿಶ್ವಕಪ್ ಸೇರಿದಂತೆ ಎಲ್ಲಾ ಏಕದಿನ ಟೂರ್ನಿಗಳು ಸಾಂಪ್ರದಾಯಿಕ 50 ಓವರ್‌ಗಳ ಮಾದರಿಯಲ್ಲೇ ಮುಂದುವರಿಯಲಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img