HomeBengaluru City“ಕತ್ತಲಲ್ಲಿ ಆತ್ಮರಕ್ಷಣೆಗಾಗಿ ಫೈರಿಂಗ್”: ಹನೂರು ಎನ್‌ಕೌಂಟರ್ ಬಗ್ಗೆ ಸದನದಲ್ಲಿ ರಾಮಲಿಂಗಾರೆಡ್ಡಿ ಸ್ಪಷ್ಟನೆ

“ಕತ್ತಲಲ್ಲಿ ಆತ್ಮರಕ್ಷಣೆಗಾಗಿ ಫೈರಿಂಗ್”: ಹನೂರು ಎನ್‌ಕೌಂಟರ್ ಬಗ್ಗೆ ಸದನದಲ್ಲಿ ರಾಮಲಿಂಗಾರೆಡ್ಡಿ ಸ್ಪಷ್ಟನೆ

For Dai;y Updates Join Our whatsapp Group

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಘಟನೆ ಕುರಿತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದು, ಮೃತರು ತಮ್ಮ ಜಮೀನಿಗೆ ತೆರಳಿರಲಿಲ್ಲ, ಬದಲಾಗಿ ಅರಣ್ಯದೊಳಗೆ 5ರಿಂದ 8 ಕಿಲೋಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಶಾಗ್ಯ ಸಮೀಪ ಕಳ್ಳಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಮಾಹಿತಿ ಹಿಂದಿನ ರಾತ್ರಿ 8 ಗಂಟೆ ಸುಮಾರಿಗೆ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಮಾಹಿತಿ ಆಧರಿಸಿ 10 ಸಿಬ್ಬಂದಿಯನ್ನು ಒಳಗೊಂಡ ಎರಡು ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಮುಂಜಾನೆ ಸುಮಾರು 5 ಗಂಟೆಗೆ ಅರಣ್ಯದ ಬಂಡೆಯೊಂದರ ಬಳಿ ಬ್ಯಾಟರಿ ಬೆಳಕು ಕಾಣಿಸಿಕೊಂಡಿದ್ದು, ಸಿಬ್ಬಂದಿ ಶರಣಾಗುವಂತೆ ಸೂಚಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ.

ಈ ವೇಳೆ ಬೇಟೆಗಾರರ ಕಡೆಯಿಂದ ಅರಣ್ಯ ಸಿಬ್ಬಂದಿಯತ್ತ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಕತ್ತಲಿನ ವಾತಾವರಣ ಹಾಗೂ ಎತ್ತರದ ಪ್ರದೇಶದ ಕಾರಣ ಎದುರಿನವರ ಚಲನವಲನ ಸ್ಪಷ್ಟವಾಗಿ ಕಾಣಿಸಿರಲಿಲ್ಲ. ಗುಂಡಿನ ಚಕಮಕಿಯಲ್ಲಿ ಅರಣ್ಯ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗುಂಡಿನ ದಾಳಿ ನಿಂತ ಬಳಿಕ ಸ್ಥಳಕ್ಕೆ ತೆರಳಿದಾಗ ಮೂವರು ಗುಂಡೇಟಿನಿಂದ ಗಾಯಗೊಂಡಿರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಸಚಿವರು ವಿವರಿಸಿದ್ದಾರೆ.

ಘಟನಾ ಸ್ಥಳದಲ್ಲಿ ಎರಡು ನಾಡಬಂದೂಕುಗಳು, ಕಾಡತೂಸುಗಳು, ಪಟಾಕಿ, ಮದ್ದಿನ ಬಾಕ್ಸ್, ಮೊಬೈಲ್‌ಗಳು, ಚಾರ್ಜರ್ ಬ್ಯಾಟರಿ ಹಾಗೂ ದಿನಸಿ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ಬ್ಯಾಗ್‌ಗಳಲ್ಲಿ ಸುಮಾರು 20ರಿಂದ 35 ಕೆ.ಜಿ. ಜಿಂಕೆ ಮಾಂಸವೂ ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣೆ ಇಲಾಖೆಯ ಕರ್ತವ್ಯವಾಗಿದ್ದು, ಪ್ರಕರಣದಲ್ಲಿ ಈಗಾಗಲೇ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಬಳಿಕ ಅರಣ್ಯ ಸಿಬ್ಬಂದಿಯಿಂದ ಉದ್ದೇಶಪೂರ್ವಕವಾಗಿ ತಪ್ಪು ನಡೆದಿರುವುದು ಅಥವಾ ಕಾನೂನು ಉಲ್ಲಂಘನೆಯಾಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ಸದನಕ್ಕೆ ಭರವಸೆ ನೀಡಿದ್ದಾರೆ.

ಇದೇ ವೇಳೆ ಪ್ರಕರಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಲು ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img