ನವದೆಹಲಿ: ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಮಾಡಲಾಗುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ನಕಲಿ ಸಂದೇಶಗಳನ್ನು ನಂಬಿ ಯಾರೂ ಮೋಸ ಹೋಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ ಹೆಸರನ್ನು ಬಳಸಿಕೊಂಡು ಕೆಲವರು ‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಎಂಬ ನಕಲಿ ಸುದ್ದಿ ಹಾಗೂ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ. ಆದರೆ, ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ವತಿಯಿಂದ ಇಂತಹ ಯಾವುದೇ ಯೋಜನೆಯನ್ನು ಜಾರಿಗೆ ತರಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರನ್ನು ದಾರಿ ತಪ್ಪಿಸುವ ಅಥವಾ ವಂಚಿಸುವ ಉದ್ದೇಶದಿಂದ ಸಚಿವಾಲಯದ ಹೆಸರಿನಲ್ಲಿ ಇಂತಹ ಫೇಕ್ ಮೆಸೇಜ್‌ಗಳನ್ನು ಹರಿಬಿಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶಗಳು ಕಂಡುಬಂದರೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಸರ್ಕಾರದ ಯಾವುದೇ ಯೋಜನೆಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು ಸಚಿವಾಲಯದ ಅಧಿಕೃತ ವೆಬ್‌ಸೈಟ್ ಹಾಗೂ ಪರಿಶೀಲಿತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಸಚಿವರು ಸೂಚಿಸಿದ್ದಾರೆ. ಪರಿಶೀಲನೆ ನಡೆಸದೆ ಯಾವುದೇ ಸಂದೇಶಗಳನ್ನು ಇತರರಿಗೆ ಫಾರ್ವರ್ಡ್ ಮಾಡಬಾರದು. ಮುಖ್ಯವಾಗಿ ಬ್ಯಾಂಕಿಂಗ್, ಹಣಕಾಸು ಹಾಗೂ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್, ಸರ್ಕಾರದ ಮಾಧ್ಯಮ ಪ್ರಕಟಣೆಗಳು ಹಾಗೂ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಮಾತ್ರ ಅವಲಂಬಿಸುವಂತೆ ಪ್ರಹ್ಲಾದ್ ಜೋಶಿ ಸಲಹೆ ನೀಡಿದ್ದಾರೆ.
‘ಉಚಿತ ಎಲೆಕ್ಟ್ರಿಕ್ ಸ್ಟೌ’ ಹೆಸರಿನಲ್ಲಿ ಬರುವ ಯಾವುದೇ ಸಂದೇಶ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಅನುಮಾನಾಸ್ಪದ ಸಂದೇಶಗಳಿಂದ ದೂರವಿದ್ದು, ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.



