ಉಡುಪಿ: ರಾಜ್ಯ ಸರ್ಕಾರ ಶಿಕ್ಷಣದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಹಿಜಬ್ ವಿಚಾರವನ್ನು ಮುಂದಿಟ್ಟುಕೊಂಡು ಓಲೈಕೆ ರಾಜಕಾರಣ ನಡೆಸುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಇಲ್ಲ, ಶಿಕ್ಷಕರ ಕೊರತೆ ಇದೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳೇ ಇಲ್ಲ. ಆದರೆ ಸರ್ಕಾರಕ್ಕೆ ಮುಖ್ಯ ಆದ್ಯತೆ ಹಿಜಬ್ ಆಗಿದೆ. ಇದು ಓಲೈಕೆ ರಾಜಕಾರಣದ ಪರಮಾವಧಿ” ಎಂದು ಟೀಕಿಸಿದರು.
“ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ 2023ರಲ್ಲಿ ಘೋಷಿಸಿದ್ದ ಸರ್ಕಾರ, ಎನ್‌ಇಪಿ ರದ್ದುಪಡಿಸಿ ಎಸ್‌ಇಪಿ ಜಾರಿಗೆ ತರದೇ ಮೂರು ವರ್ಷ ಕಳೆದಿವೆ. ಶಿಕ್ಷಣ ಕ್ಷೇತ್ರದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ” ಎಂದರು.
ಹಿಜಬ್ ವಿಚಾರದಿಂದ ಶಾಲಾ ಮಕ್ಕಳಲ್ಲಿ ದ್ವೇಷ ಮತ್ತು ವಿಭಜನೆಯ ಮನೋಭಾವ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಸರ್ಕಾರದ ನೀತಿ ಒಡೆದು ಆಳುವ ರಾಜಕಾರಣ. ಈಗ ವಿದ್ಯಾರ್ಥಿಗಳ ಮನಸ್ಸಿನಲ್ಲೇ ಭೇದಭಾವ ಬೆಳೆಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಮಾತನಾಡಿದ ಅವರು, “ರಾಜ್ಯ ಸರ್ಕಾರವೇ ಮೊದಲು ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಹಾಕಿತ್ತು. ಈಗ ಜಾಗತಿಕ ಯುದ್ಧದ ಪರಿಣಾಮವಾಗಿ ಇಂಧನ ಬೆಲೆ ಏರಿಕೆಯಾಗಿದೆ. ಯುದ್ಧ ಪರಿಸ್ಥಿತಿ ತಣ್ಣಗಾದರೆ ಬೆಲೆ ಸಹಜವಾಗಿಯೇ ಇಳಿಕೆಯಾಗುತ್ತದೆ” ಎಂದು ಪ್ರತಿಕ್ರಿಯಿಸಿದರು.



