ಮಂಗಳೂರು: ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಈ ದೂರು ಸಲ್ಲಿಸಿದ್ದು, ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ದೂರು ದಾಖಲಿಸದಿದ್ದರೆ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ವಿಕಾಸ್ ಪುತ್ತೂರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕನ ಆರೋಪವೇನು?
ದೂರು ನೀಡಿದ ಬಳಿಕ ಮಾತನಾಡಿದ ವಿಕಾಸ್ ಪುತ್ತೂರು, ದೇಶ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಂದೇ ಮಾತರಂಗೆ ಅಪಮಾನವಾಗಿದೆ ಎಂದು ಆರೋಪಿಸಿದರು.
ಧ್ವಜಾರೋಹಣ ವೇಳೆ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಹಾಡುವ ಬಗ್ಗೆ ಸೂಚನೆ ನೀಡಿದ ಕ್ರಮ ರಾಷ್ಟ್ರದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದರು. ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಗೀತೆ ಆಗಿರುವುದರಿಂದ ಅದಕ್ಕೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಕಾನೂನು ಕ್ರಮಕ್ಕೆ ಒತ್ತಾಯ:
ರಾಷ್ಟ್ರೀಯ ಚಿಹ್ನೆಗಳು ಮತ್ತು ಸಂಕೇತಗಳಿಗೆ ಅಪಮಾನ ಮಾಡುವುದು ಕಾನೂನಿನ ಪ್ರಕಾರ ಅಪರಾಧ ಎಂದು ವಿಕಾಸ್ ಪುತ್ತೂರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪೊಲೀಸರು ಯಾವುದೇ ಕಾರಣಕ್ಕೂ ಎಫ್‌ಐಆರ್ ದಾಖಲಿಸದಿದ್ದರೆ ಖಾಸಗಿ ದೂರು ಸಲ್ಲಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ವಂದೇ ಮಾತರಂ ಕುರಿತು ವಿರೋಧದ ನಿಲುವು ಹೊಂದಿದೆ ಎಂದು ವಿಕಾಸ್ ಪುತ್ತೂರು ಆರೋಪಿಸಿದ್ದು, 1937ರಲ್ಲಿಯೇ ವಂದೇ ಮಾತರಂ ಅನ್ನು ಪೂರ್ಣ ಪ್ರಮಾಣದಲ್ಲಿ ಹಾಡಬಾರದು ಎಂಬ ನಿರ್ಧಾರ ಕೈಗೊಂಡಿತ್ತು ಎಂದು ಹೇಳಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಪೊಲೀಸರ ಮುಂದಿನ ಕ್ರಮದತ್ತ ಗಮನ ನೆಟ್ಟಿದೆ.



