ದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ತನ್ನ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 ಮಾರ್ಗಸೂಚಿಗಳಂತೆ, ಜುಲೈ 1, 2026 ರಿಂದ ಆರಂಭವಾಗುವ ಶೈಕ್ಷಣಿಕ ವರ್ಷದಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ.
ಹೊಸ ನಿಯಮದಂತೆ ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿಂದ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು ಎಂದು CBSE ಸ್ಪಷ್ಟಪಡಿಸಿದೆ. ಈ ಮೂಲಕ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳ ಕಲಿಕೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಈ ನಿರ್ಧಾರದಿಂದ CBSE ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಬಹುಭಾಷಾ ಜ್ಞಾನವನ್ನು ಪಡೆಯುವ ಜೊತೆಗೆ ಭಾರತೀಯ ಭಾಷೆಗಳ ಸಂರಕ್ಷಣೆಯೂ ಸಾಧ್ಯವಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಬಿಎಸ್‌ಇ ತಿಳಿಸಿದಂತೆ, 9ನೇ ತರಗತಿಯಿಂದ ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಿದ್ದರೂ, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ ಯಾವುದೇ ಪ್ರಮುಖ ಬೋರ್ಡ್ ಪರೀಕ್ಷೆ ಇರದು. ಇದರಿಂದ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆಯಾಗಲಿದೆ.
ಮೇ 15 ರಂದು ಹೊರಡಿಸಿದ ಅಧಿಕೃತ ಸುತ್ತೋಲೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಲಾಗಿದ್ದು, ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.



