ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕಳೆದ ರಾತ್ರಿ ಕೇವಲ ಹತ್ತು ನಿಮಿಷ ಸುರಿದ ಭಾರಿ ಗಾಳಿ-ಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಶೃಂಗಾರ ಬಾಗು ತಾಂಡದಲ್ಲಿ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಹಲವು ಬೃಹತ್ ಮರಗಳು ನೆಲಕ್ಕುರುಳಿವೆ.
ಭಾರೀ ಗಾಳಿಯ ರಭಸಕ್ಕೆ ದೊಡ್ಡ ಮರಗಳು ಮನೆಗಳ ಮೇಲೆಯೇ ಬಿದ್ದ ಪರಿಣಾಮ ಹಲವಾರು ಮನೆಗಳಿಗೆ ಹಾನಿಯಾಗಿದೆ. ನಿನ್ನೆ ಸಂಜೆದಿಂದಲೇ ಎರಡು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಕೇವಲ ಹತ್ತು ನಿಮಿಷಗಳ ಗಾಳಿ-ಮಳೆಯ ಅಬ್ಬರದಿಂದಲೇ ಎರಡು ಗ್ರಾಮಗಳಲ್ಲಿ ಭಾರೀ ಅವಾಂತರ ಉಂಟಾಗಿದ್ದು, ಕೂಲಿ ಕೆಲಸವನ್ನೇ ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಬಸವಪಟ್ಟಣ ಗ್ರಾಮದಲ್ಲಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಅಡಿಕೆ, ತೆಂಗು ಹಾಗೂ ಟೊಮೆಟೊ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ರೈತನೊಬ್ಬ ಸಾಲ ಮಾಡಿ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಎಕರೆಗೆ ₹1 ಲಕ್ಷದಿಂದ ₹1.5 ಲಕ್ಷವರೆಗೆ ವೆಚ್ಚ ಮಾಡಿದ್ದರೂ, ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆ ಹಾಳಾಗಿದೆ.
ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿರುವುದರಿಂದ ಟೊಮೆಟೊ ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ. ಬಿರು ಬೇಸಿಗೆಯ ನಡುವೆಯೂ ಟ್ಯಾಂಕರ್ ಹಾಗೂ ಬೋರ್ವೆಲ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದ ರೈತರು, ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ಕಣ್ಣೀರಿಡುತ್ತಿದ್ದಾರೆ.



