ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲಿನಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ.
ರೈಲಿನ ಬೋಗಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ವೇಳೆ, ಅದಕ್ಕೂ ಮುನ್ನವೇ ಬೋಗಿಯಿಂದ ದಟ್ಟ ಹೊಗೆ ಹೊರಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ವೇಳೆ ರೈಲು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



