HomeGadag Newsನೀರು ಕೊಡಿ ಎಂದವರಿಗೆ ‘ರಾಜಕಾರಣ’ದ ತಿರುಗೇಟು: ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ

ನೀರು ಕೊಡಿ ಎಂದವರಿಗೆ ‘ರಾಜಕಾರಣ’ದ ತಿರುಗೇಟು: ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ₹59.80 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೂ ಬಿಜೆಪಿ ಮುಖಂಡರು ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಆರೋಪಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಅವಳಿ ನಗರದ ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅವಳಿ ನಗರದ ಐದು ಕಡೆ ಮೇಲ್ಮಟ್ಟದ ಜಲಸಂಗ್ರಹಾರಗಳ ನಿರ್ಮಾಣ ಸೇರಿದಂತೆ ₹59.80 ಕೋಟಿ ವೆಚ್ಚದ ಕಾಮಗಾರಿಗೆ ಮೇ 6, 2026ರಂದು ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಹಮ್ಮಿಗಿ ಬ್ಯಾರೇಜ್‌ನಿಂದ ಹಮ್ಮಿಗಿ ಪಂಪ್‌ಹೌಸ್, ಡಂಬಳ ಪಂಪ್‌ಹೌಸ್ ಹಾಗೂ ಪಾಪನಾಶಿ ನೀರು ಶುದ್ಧೀಕರಣ ಘಟಕಗಳಲ್ಲಿ ಹೊಸ ಮೋಟಾರ್, ಪಂಪ್, ಪ್ಯಾನಲ್ ಬೋರ್ಡ್ ಮತ್ತು ಟಿಸಿ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಅಪೂರ್ಣಗೊಂಡಿರುವ ಎರಡು ಜಲಸಂಗ್ರಹಾರಗಳನ್ನು ಪೂರ್ಣಗೊಳಿಸಿ ಒಟ್ಟು 18 ಮೇಲ್ಮಟ್ಟದ ಜಲಸಂಗ್ರಹಾರಗಳಿಗೆ ಏಕಕಾಲದಲ್ಲಿ ನೀರು ತುಂಬಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಆಗಸ್ಟ್‌ನಲ್ಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪಾಪನಾಶಿ ನೀರು ಶುದ್ಧೀಕರಣ ಘಟಕದಿಂದ ಗದಗ ಎ ಪಾಯಿಂಟ್‌ವರೆಗೆ ಹೊಸ ಪೈಪ್‌ಲೈನ್ ಅಳವಡಿಸಲು ₹26.33 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲು ಅಪೆಕ್ಸ್ ಸಮಿತಿ ಸೆ. 28ರಂದು ನಿರ್ಣಯ ಕೈಗೊಂಡಿದೆ. ಪಾಪನಾಶಿ ನೀರು ಶುದ್ಧೀಕರಣ ಘಟಕದ ಬಳಿ ₹20 ಕೋಟಿ ವೆಚ್ಚದಲ್ಲಿ ನೀರು ಸಂಗ್ರಹಣಾ ಕೆರೆ ನಿರ್ಮಿಸುವ ವಿಸ್ತೃತ ಯೋಜನೆಯೂ ಟೆಂಡರ್ ಹಂತದಲ್ಲಿದೆ ಎಂದರು.

ನೀರಿನ ಸಮಸ್ಯೆ ನಿವಾರಣೆಗೆ ಇಷ್ಟೆಲ್ಲ ಕ್ರಮಗಳು ನಡೆಯುತ್ತಿದ್ದರೂ ಅನಿಲ್ ಮೆಣಸಿನಕಾಯಿ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸೂಟಿ ಆರೋಪಿಸಿದರು.

ಗದಗ-ಬೆಟಗೇರಿ ಅವಳಿ ನಗರದ ನೀರಿನ ಸಮಸ್ಯೆ ಪರಿಹಾರಕ್ಕೆ ದಿ. ಕೆ.ಎಚ್. ಪಾಟೀಲರು 1972ರಲ್ಲೇ ಬೋರ್‌ವೆಲ್‌ಗಳನ್ನು ಕೊರೆಸುವ ಮೂಲಕ ಕ್ರಮ ಕೈಗೊಂಡಿದ್ದರು. 1992ರ ಮಾರ್ಚ್ 16ರಂದು ತುಂಗಭದ್ರಾ ನದಿಯಿಂದ ನೀರು ತರುವ ಯೋಜನೆ ಜಾರಿಗೆ ಬಂದಿತು. 2013ರಲ್ಲಿ ಎಚ್.ಕೆ. ಪಾಟೀಲರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಹಮ್ಮಿಗಿ ಬ್ಯಾರೇಜ್‌ನಿಂದ ಪ್ರತಿದಿನ 40 ಎಂಎಲ್‌ಡಿ ನೀರು ತರುವ ಎರಡನೇ ಹಂತದ ಯೋಜನೆ ಜಾರಿಗೊಳಿಸಿದ್ದರು ಎಂದು ಅಸೂಟಿ ವಿವರಿಸಿದರು.

ಟಿಕೆಟ್ ಭಯದಿಂದ ಹೋರಾಟ ಎಂದ ಅಸೂಟಿ

ಅನಿಲ್ ಮೆಣಸಿನಕಾಯಿ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದಿಂದ ದೂರವಾಗಿದ್ದರು. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದರು. ಇದೀಗ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಮತ್ತೆ ಗದಗದಲ್ಲಿ ಸಕ್ರಿಯರಾಗಿ ಹೋರಾಟ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಪಕ್ಷದಿಂದಲೂ ನೋಟಿಸ್ ಪಡೆದಿದ್ದಾರೆ ಎಂದು ಅಸೂಟಿ ಆರೋಪಿಸಿದರು.

ಟಿಕೆಟ್ ಕೈತಪ್ಪುವ ಭಯದಿಂದ ಈ ರೀತಿಯ ಹೋರಾಟದ ನಾಟಕ ಮಾಡುತ್ತಿದ್ದಾರೆ ಎಂದು ಬಿ.ಬಿ. ಅಸೂಟಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ, ಶಕುಂತಲಾ ಅಕ್ಕಿ, ನಮಾಜಿ, ಇಮ್ತಿಯಾಜ್ ಶಿರಹಟ್ಟಿ, ಕೃಷ್ಣ ಪರಾಪೂರ, ಲಕ್ಷ್ಮಿ ಸಿದ್ದಮ್ಮನಹಳ್ಳಿ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

₹59.80 ಕೋಟಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೂ ನೀರಿನ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ.- ಬಿ.ಬಿ. ಅಸೂಟಿ

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img