ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಸುರಿದ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಮಳೆಗಾಳಿಯ ಅಬ್ಬರಕ್ಕೆ ಹಲವು ಅವಾಂತರಗಳು ಸಂಭವಿಸಿದ್ದು, ರೈಲು ಸಂಚಾರಕ್ಕೂ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ.
ಮೈಸೂರು-ಶಿವಮೊಗ್ಗ ಹಾಗೂ ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲುಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಪರದಾಡುವಂತಾಯಿತು. ಭಾರೀ ಗಾಳಿಗೆ ರೈಲ್ವೆ ಹಳಿಯ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಇದರ ಪರಿಣಾಮವಾಗಿ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಹಾಗೂ ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲುಗಳ ಸಂಚಾರಕ್ಕೂ ಅಡಚಣೆ ಎದುರಾಯಿತು. ಬಳಿಕ ಸಿಬ್ಬಂದಿ ಮರ ತೆರವುಗೊಳಿಸಿ, ವಿದ್ಯುತ್ ಲೈನ್ ದುರಸ್ತಿ ಮಾಡಿದ ನಂತರ ರೈಲು ಸಂಚಾರವನ್ನು ಪುನಃ ಆರಂಭಿಸಲಾಯಿತು.
ಇನ್ನೊಂದೆಡೆ, ಭಾರೀ ಮಳೆಯ ನಡುವೆ ಬಡಿದ ಸಿಡಿಲಿಗೆ ಸುಮಾರು 50 ಕುರಿಗಳು ಸಾವನ್ನಪ್ಪಿದ ದುರ್ಘಟನೆ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಮೂಲದ ನರಸಿಂಹಮೂರ್ತಿ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗ ಭಾಗದಲ್ಲಿ ಕುರಿ ಮೇಯಿಸುತ್ತಿದ್ದ ಅವರು, ಸಿರಿಯೂರು ಗ್ರಾಮದ ರವಿಕುಮಾರ್ ಅವರ ತೋಟದಲ್ಲಿ ಕುರಿಗಳನ್ನು ತಂಗಿಸಿದ್ದರು.
ತಡರಾತ್ರಿ ಸುರಿದ ಭಾರೀ ಮಳೆಯ ವೇಳೆ ಕುರಿಗಳು ತೋಟದಲ್ಲಿ ಮಲಗಿದ್ದಾಗ ಸಿಡಿಲು ಬಡಿದು, 400 ಕುರಿಗಳ ಪೈಕಿ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



