ಬೆಂಗಳೂರು: ನಗರದಲ್ಲಿ ಲೀಸ್ ಮನೆ ಹುಡುಕುತ್ತಿದ್ದವರನ್ನೇ ಟಾರ್ಗೆಟ್ ಮಾಡಿ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆಸಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ‘ಜಾನ್ಸ್ ಅಸೆಟ್’ ಎಂಬ ಮಿಡಿಯೇಟರ್ ಕಂಪನಿ, ಮನೆ ಲೀಸ್ ಕೊಡಿಸುವ ಹೆಸರಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ವಂಚನೆ ಎಸಗಿದ್ದು, ಕಂಪನಿ ಮಾಲೀಕ ಸ್ಟೀಫನ್ ಅರ್ಥರ್ ಸದ್ಯ ಪರಾರಿಯಾಗಿದ್ದಾನೆ.
ನಗರದಲ್ಲಿ ಲೀಸ್ ಮನೆಗಳ ಕೊರತೆಯನ್ನು ಬಂಡವಾಳ ಮಾಡಿಕೊಂಡಿದ್ದ ಕಂಪನಿ, “ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಿಮಗಾಗಿ ಮನೆ ಹುಡುಕಿ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ” ಎಂದು ಸಾರ್ವಜನಿಕರನ್ನು ನಂಬಿಸಿತ್ತು. ಹಣವೂ ಉಳಿಯುತ್ತದೆ, ಮಾಸಿಕ ಬಾಡಿಗೆಯ ಭಾರವೂ ಇರುವುದಿಲ್ಲ ಎಂಬ ಭರವಸೆ ನೀಡಿ ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿವರೆಗೆ ಹಣ ಸಂಗ್ರಹಿಸಿತ್ತು.
ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದ ಕಂಪನಿ, ಬಳಿಕ ಬಾಡಿಗೆ ಕಟ್ಟುವುದನ್ನು ನಿಲ್ಲಿಸಿ ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದಾಗ ಮಾತ್ರ ಹಲವರಿಗೆ ವಂಚನೆ ಗೊತ್ತಾಗಿದೆ.
ಗಾಯತ್ರಿ ಎಂಬ ಸಂತ್ರಸ್ತೆಯಿಂದಲೇ 37 ಲಕ್ಷ ರೂಪಾಯಿ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಹಣ ವಾಪಸ್ ಕೇಳಲು ಹೋದಾಗ, ಅದನ್ನು ಇನ್ವೆಸ್ಟ್ ಮಾಡಿದರೆ ತಿಂಗಳಿಗೆ 4% ಬಡ್ಡಿ ನೀಡುವುದಾಗಿ ಕಂಪನಿ ಮತ್ತೊಮ್ಮೆ ಆಮಿಷ ಒಡ್ಡಿತ್ತಂತೆ. ಆರಂಭದಲ್ಲಿ ಎರಡು ತಿಂಗಳು ಬಡ್ಡಿ ನೀಡಿ ಬಳಿಕ ಕಂಪನಿ ಸಂಪೂರ್ಣ ಕೈಕೊಟ್ಟಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಸದ್ಯ ಕಂಪನಿ ಕಚೇರಿ ಬಂದ್ ಆಗಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಪ್ರಕರಣ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



