ಶಿವಮೊಗ್ಗ: ಭಾನುವಾರ ಸಂಜೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ರೈಲ್ವೆ ಟ್ರ್ಯಾಕ್ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಹಲವು ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಎದುರಾಯಿತು.
ಮೈಸೂರು-ಶಿವಮೊಗ್ಗ ಮತ್ತು ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲುಗಳ ಜೊತೆಗೆ ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಸಂಚಾರಕ್ಕೂ ತೊಂದರೆಯಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಬಳಿಕ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್ ಲೈನ್ ಸರಿಪಡಿಸಿದ ನಂತರ ಸಂಚಾರ ಆರಂಭವಾಯಿತು.
ಮತ್ತೊಂದೆಡೆ ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದಲ್ಲಿ ಸಿಡಿಲಿನ ಆಘಾತಕ್ಕೆ 50 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನರಸಿಂಹಮೂರ್ತಿ ಎಂಬುವವರಿಗೆ ಸೇರಿದ ಕುರಿಗಳನ್ನು ಶಿವಮೊಗ್ಗದಲ್ಲಿ ಮೇಯಿಸಲಾಗುತ್ತಿತ್ತು.
ತಡರಾತ್ರಿ ಸುರಿದ ಮಳೆಯ ವೇಳೆ ತೋಟದಲ್ಲಿ ಕುರಿಗಳು ಮಲಗಿದ್ದಾಗ ಸಿಡಿಲು ಬಡಿದಿದ್ದು, 400 ಕುರಿಗಳ ಪೈಕಿ 50 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಈ ಘಟನೆ ಕುರಿಗಾಹಿಗೆ ಭಾರೀ ನಷ್ಟ ಉಂಟುಮಾಡಿದೆ.



