ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಅಂತಿಮ ತೀರ್ಮಾನವನ್ನು ಶುಕ್ರವಾರ ನಡೆಯುವ ಕೆಇಆರ್ಸಿ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಖಾಸಗೀಕರಣಕ್ಕೆ ಸಂಬಂಧಿಸಿ ಟಾಟಾ ಸಂಸ್ಥೆಯವರು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಎಸ್ಕಾಂಗಳು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಖಾಸಗೀಕರಣಕ್ಕೆ ಒಪ್ಪದಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಶುಕ್ರವಾರದ ಕೆಇಆರ್ಸಿ ಸಭೆಯಲ್ಲಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಸಿಎಂ, ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ‘ಪ್ರಜಾಸೇವೆ ಇಲಾಖೆ’ ಆರಂಭಿಸಲಾಗುತ್ತಿದೆ. ಈ ಇಲಾಖೆಯ ಜವಾಬ್ದಾರಿಯನ್ನು ಒಬ್ಬ ಸಚಿವರಿಗೆ ನೀಡಲಾಗುವುದು. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಕನಿಷ್ಠ ಎರಡು ದಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವುದು ಕಡ್ಡಾಯವಾಗಲಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಈ ಸಭೆಗಳಲ್ಲಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಜನರ ಅಹವಾಲುಗಳನ್ನು ನೇರವಾಗಿ ಸರ್ಕಾರವೇ ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಒಂದು ದಿನ ಮುಂಚಿತವಾಗಿ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಹೇಳಿದರು. ತಾವು ಕೂಡ ಕೆಲ ತಾಲೂಕುಗಳಲ್ಲಿ ಇಂತಹ ಸಭೆಗಳಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ.



