ಶಿವಮೊಗ್ಗ: ನಗರದ ರವೀಂದ್ರ ನಗರದ ಮನೆಯೊಂದರಲ್ಲಿ ಮಹಿಳೆ ಹಾಗೂ ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸ್ಥಳೀಯವಾಗಿ ಆತಂಕ ಮೂಡಿಸಿದೆ. ಮೃತರನ್ನು 57 ವರ್ಷದ ಪ್ರಭಾವತಿ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಭಾವತಿ ಅವರು ಕೆಲವು ದಿನಗಳ ಹಿಂದೆಯೇ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರೊಂದಿಗೆ ಮನೆಯೊಳಗೆ ಇದ್ದ ಸಾಕು ನಾಯಿ ಕೂಡ ಅದೇ ಅವಧಿಯಲ್ಲಿ ಸಾವನ್ನಪ್ಪಿದೆ. ಇಬ್ಬರ ಮೃತದೇಹಗಳು ದೀರ್ಘಕಾಲದಿಂದ ಪತ್ತೆಯಾಗದೆ ಕೊಳೆತ ಸ್ಥಿತಿಗೆ ತಲುಪಿದ್ದವು.
ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ತೆರೆಯಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



