ಶಿವಮೊಗ್ಗ: ರೌಡಿಶೀಟರ್ ಕುಳ್ಳಿ ಕಿರಣ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಉಮೇಶ್ ನಾಯ್ಕ್ ಅಲಿಯಾಸ್ ಡಿಯೋ ಉಮೇಶ್ ಎಂಬಾತನ ಎಡಗಾಲಿಗೆ ತುಂಗಾನಗರ ಪೊಲೀಸರು ಫೈರಿಂಗ್ ಮಾಡಿದ್ದು, ಗಾಯಗೊಂಡ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.**
ಶಿವಮೊಗ್ಗ ಹೊರವಲಯದ ಎನ್.ಆರ್.ಪುರದಲ್ಲಿ ಉಮೇಶ್ ಇರುವ ಬಗ್ಗೆ ಮಾಹಿತಿ ಪಡೆದ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದರು. ಜೀಪಿನಲ್ಲಿ ಕರೆತರುವಾಗ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಕೆಳಗಿಳಿದ ಉಮೇಶ್, ಪೊಲೀಸ್ ಕಾನ್ಸ್ಟೆಬಲ್ ತಮ್ಮಣ್ಣ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಎಸ್ಪಿ ನಿಖಿಲ್ ತಿಳಿಸಿದ್ದಾರೆ.
ಈ ವೇಳೆ ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಗುರುರಾಜ್ ಅವರು ಉಮೇಶ್ಗೆ ಎಚ್ಚರಿಕೆ ನೀಡಿ ಶರಣಾಗುವಂತೆ ಸೂಚಿಸಿದ್ದಾರೆ. ಏರ್ ಫೈರ್ ಮಾಡಿ ಎಚ್ಚರಿಕೆ ನೀಡಿದ ಬಳಿಕವೂ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಎಡಗಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಉಮೇಶ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಮೇಶ್ ನಾಯ್ಕ್ ವಿರುದ್ಧದ ಕ್ರಮವು ಭಾನುವಾರ ನಡೆದ ಕುಳ್ಳಿ ಕಿರಣ್ ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿದೆ. ತುಂಗಾನಗರ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಗ್ರಾಮದಲ್ಲಿ ಕಿರಣ್ ಹತ್ಯೆಯಾಗಿತ್ತು.
ಕುಳ್ಳಿ ಕಿರಣ್ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಸೇರಿದಂತೆ ಆರು ಪ್ರಕರಣಗಳಿದ್ದವು ಎಂದು ಎಸ್ಪಿ ನಿಖಿಲ್ ಈ ಹಿಂದೆ ತಿಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ಆತ ಶಿವಮೊಗ್ಗದಲ್ಲಿ ಹೆಚ್ಚಾಗಿ ವಾಸಿಸುತ್ತಿರಲಿಲ್ಲ. ಆತನ ಸಹಚರರೇ ಹತ್ಯೆ ಮಾಡಿರಬಹುದು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕಿರಣ್ನನ್ನು ಗಡಿಪಾರು ಮಾಡುವ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದರು ಹಾಗೂ ರೌಡಿ ಪಡೆ ಆತನ ಮೇಲೆ ನಿಗಾ ಇಟ್ಟಿತ್ತು ಎಂದು ಎಸ್ಪಿ ಮಾಹಿತಿ ನೀಡಿದ್ದರು.



