HomeBengaluru News‘ಮೂರನೇ ಪಟ್ಟಿಯಲ್ಲಾದರೂ ಸೇರಿಸಿ’: ಯಾದಗಿರಿ–ಗುರುಮಠಕಲ್ ಬರ ಪಟ್ಟಿಗೆ ಆಗ್ರಹಿಸಿ ಕಂದಕೂರ್ ಧರಣಿ

‘ಮೂರನೇ ಪಟ್ಟಿಯಲ್ಲಾದರೂ ಸೇರಿಸಿ’: ಯಾದಗಿರಿ–ಗುರುಮಠಕಲ್ ಬರ ಪಟ್ಟಿಗೆ ಆಗ್ರಹಿಸಿ ಕಂದಕೂರ್ ಧರಣಿ

For Dai;y Updates Join Our whatsapp Group

ಬೆಂಗಳೂರು: ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿದರು. ಎರಡೂ ತಾಲೂಕುಗಳನ್ನು ಮೂರನೇ ಬರ ಪಟ್ಟಿಯಲ್ಲಾದರೂ ಸೇರ್ಪಡೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.**

ಸರ್ಕಾರ ಈಗಾಗಲೇ ಮೊದಲ ಹಾಗೂ ಎರಡನೇ ಹಂತದ ಬರ ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಎರಡೂ ಪಟ್ಟಿಗಳಲ್ಲೂ ಸೇರಿಸದೆ ತಾರತಮ್ಯ ಮಾಡಲಾಗಿದೆ ಎಂದು ಕಂದಕೂರ್ ಆರೋಪಿಸಿದರು. ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಅವರು, ಕ್ಷೇತ್ರದ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಶರಣಗೌಡ ಕಂದಕೂರ್ ಅವರ ಹೋರಾಟಕ್ಕೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆಂಬಲ ವ್ಯಕ್ತಪಡಿಸಿದರು. ಧರಣಿಯಲ್ಲಿ ಕಂದಕೂರ್ ಅವರೊಂದಿಗೆ ಕುಳಿತ ಛಲವಾದಿ, ಸರ್ಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ ಎಂದು ನಿರೀಕ್ಷಿಸಿದ್ದೆ. ಎರಡನೇ ಪಟ್ಟಿಯಲ್ಲೂ ಬರಲಿಲ್ಲ. ಮೂರನೇ ಪಟ್ಟಿಯಲ್ಲಿ ಆದರೂ ನಮ್ಮ ಕ್ಷೇತ್ರ ಸೇರ್ಪಡೆಯಾಗಬೇಕು’ ಎಂದು ಕಂದಕೂರ್ ಹೇಳಿದರು.

‘ನನ್ನನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಬೇಕೆಂದರೆ ನನ್ನ ಕ್ಷೇತ್ರದಲ್ಲಿ ಚುನಾವಣೆ ಮಾಡಬೇಕು. ಬರ ಪಟ್ಟಿಯಲ್ಲಿ ಕ್ಷೇತ್ರವನ್ನು ಟಾರ್ಗೆಟ್ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಭೂಮಿಯಿದೆ. ನೀರಾವರಿ ವ್ಯವಸ್ಥೆಯೂ ಇಲ್ಲ. ಈ ವಿಚಾರ ಸರ್ಕಾರದ ಗಮನದಲ್ಲಿದೆ’ ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಜನರು ಬೀದಿಗೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಎನ್‌ಡಿಆರ್‌ಎಫ್ ಮಾನದಂಡಗಳ ಆಧಾರದ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಎಲ್ಲ ವಿಚಾರಗಳಿಗೂ ಶಾಸಕರು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಬೇಕೇ ಎಂದು ಪ್ರಶ್ನಿಸಿದ ಕಂದಕೂರ್, ಮೂರನೇ ಬರ ಪಟ್ಟಿಯಲ್ಲಿ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಸೇರಿಸಲೇಬೇಕು ಎಂದು ಆಗ್ರಹಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img