HomeBengaluru Newsಜನರೇ ಸಿಕ್ಕ ಸಿಕ್ಕ ಕ್ಲಿನಿಕ್‌ಗೆ ಹೋಗಬೇಡಿ! ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!

ಜನರೇ ಸಿಕ್ಕ ಸಿಕ್ಕ ಕ್ಲಿನಿಕ್‌ಗೆ ಹೋಗಬೇಡಿ! ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಕಲಿ ಕ್ಲಿನಿಕ್‌ಗಳು ಹಾಗೂ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಜನರ ಆರೋಗ್ಯ ಮತ್ತು ಜೀವದ ಜೊತೆ ಚೆಲ್ಲಾಟ ನಡೆಸಲಾಗುತ್ತಿದೆ.

ಸೂಕ್ತ ವೈದ್ಯಕೀಯ ಪದವಿ, ತರಬೇತಿ ಹಾಗೂ ನೋಂದಣಿ ಇಲ್ಲದೇ ಚಿಕಿತ್ಸೆ ನೀಡುತ್ತಿರುವವರ ವಿರುದ್ಧ ಆರೋಗ್ಯ ಇಲಾಖೆ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಇದುವರೆಗೆ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಆದರೂ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ಹೆಸರಿನಲ್ಲಿ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವವರ ಬಗ್ಗೆಯೂ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಬೆಂಗಳೂರು ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಕೆಲವರು ‘ಮೊಬೈಲ್ ಕ್ಲಿನಿಕ್’ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿದಿನ ಸ್ಥಳ ಹಾಗೂ ಮೊಬೈಲ್‌ ನಂಬರ್ ಬದಲಾಯಿಸಿಕೊಂಡು ಚಿಕಿತ್ಸೆ ನೀಡುವ ಮೂಲಕ ಅಧಿಕಾರಿಗಳ ಕಣ್ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಂಬಿಬಿಎಸ್ ಸೇರಿದಂತೆ ಅಗತ್ಯ ವೈದ್ಯಕೀಯ ಅರ್ಹತೆ ಇಲ್ಲದ ಕೆಲವರು ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ.

ನಕಲಿ ವೈದ್ಯರ ಚಿಕಿತ್ಸೆಯಿಂದ ಅಪಾಯ:

ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಔಷಧ ಹಾಗೂ ತಪ್ಪು ಚಿಕಿತ್ಸೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಯಾವುದೇ ಕ್ಲಿನಿಕ್ ಅಥವಾ ಆಸ್ಪತ್ರೆಗೆ ತೆರಳುವ ಮುನ್ನ ವೈದ್ಯರ ವಿದ್ಯಾರ್ಹತೆ, ನೋಂದಣಿ ಪ್ರಮಾಣಪತ್ರ ಹಾಗೂ ಆಸ್ಪತ್ರೆಯ ಮಾನ್ಯತೆ ಪರಿಶೀಲಿಸಬೇಕು. ತುರ್ತು ಸಂದರ್ಭದಲ್ಲಿ ಸಿಕ್ಕಸಿಕ್ಕ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಅಧಿಕೃತ ಹಾಗೂ ನೋಂದಾಯಿತ ವೈದ್ಯರನ್ನು ಸಂಪರ್ಕಿಸುವಂತೆ ಇಲಾಖೆ ಸಲಹೆ ನೀಡಿದೆ.

ಅಲ್ಲದೆ, ನಕಲಿ ವೈದ್ಯರು ಅಥವಾ ಅನಧಿಕೃತ ಕ್ಲಿನಿಕ್‌ಗಳ ಕುರಿತು ಮಾಹಿತಿ ದೊರೆತರೆ ಆರೋಗ್ಯ ಇಲಾಖೆಗೆ ದೂರು ನೀಡಿ, ನಕಲಿ ವೈದ್ಯರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ಕಲುಷಿತ ಆಹಾರ ನೀಡುತ್ತಿದ್ದ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿರುವ ಸರ್ಕಾರ ಇದೀಗ ನಕಲಿ ವೈದ್ಯರ ಜಾಲದ ವಿರುದ್ಧವೂ ಕಾರ್ಯಾಚರಣೆ ತೀವ್ರಗೊಳಿಸಿದೆ. ಸಾರ್ವಜನಿಕರು ಜಾಗೃತರಾಗುವುದರ ಜೊತೆಗೆ ಇಲಾಖೆಯೊಂದಿಗೆ ಕೈಜೋಡಿಸಿದಾಗ ಮಾತ್ರ ನಕಲಿ ವೈದ್ಯರ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img