ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಕೇಂಬ್ರಿಡ್ಜ್ ಶಾಲೆ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬಾಡಿಗೆದಾರರು ನಿಲ್ಲಿಸಿದ್ದ ಬೈಕ್‌ಗಳು ಏಕಾಏಕಿ ಹೊತ್ತಿ ಉರಿದಿವೆ. ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಮೀಟರ್ ಬೋರ್ಡ್‌ಗೂ ಬೆಂಕಿ ತಗುಲಿದ್ದು, ಮನೆಯ ಬಾಗಿಲು ಹಾಗೂ ಕಿಟಕಿಗಳಿಗೂ ಬೆಂಕಿ ಆವರಿಸಿದೆ.
ಅಚ್ಚರಿ ಎಂಬಂತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಜೊತೆಗೆ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್‌ಗೂ ಬೆಂಕಿ ತಗುಲಿದೆ. ಹೀಗಾಗಿ ಬೆಂಕಿ ಅವಘಡದ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿತೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಬಾಡಿಗೆ ಮನೆಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

