ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಹಾಗೂ ಅದನ್ನು ಸಮರ್ಥಿಸಿಕೊಂಡ ಆರೋಪದ ಮೇಲೆ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಇದೀಗ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ.
ಕಾಂಗ್ರೆಸ್ ಮುಖಂಡ ರಾಮಪ್ಪ ಎಂಬುವರು ಸೆಪ್ಟೆಂಬರ್ 4ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಜೀರೋ ಎಫ್‌ಐಆರ್ ದಾಖಲಾಗಿತ್ತು. ಇದೀಗ ಘಟನೆ ನಡೆದ ಸ್ಥಳ ಆಧರಿಸಿ ಎಫ್‌ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಈ ವಿವಾದ ಸಂಬಂಧ ದೇಶಾದ್ಯಂತ ಸುಮಾರು 8 ಎಫ್‌ಐಆರ್‌ಗಳು ದಾಖಲಾಗಿವೆ.
ಅಖಿಲ ಭಾರತ ಆದಿವಾಸಿ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ನೀಡಿದ ಲಿಖಿತ ದೂರಿನ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 196(1)(ಬಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3(1)(ಯು), ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955ರ ಸಂಬಂಧಿತ ಸೆಕ್ಷನ್‌ಗಳ ಅಡಿ ಜೀರೋ ಎಫ್‌ಐಆರ್ ದಾಖಲಾಗಿತ್ತು.
2026ರ ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಭಾಷಣ ಮಾಡಿದ್ದರು. ಸಮಾವೇಶ ಮುಗಿದ ಬಳಿಕ ಆಗಸ್ಟ್ 10ರಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆ ಜಾಗದಲ್ಲಿ ಶುದ್ಧೀಕರಣ ಪೂಜೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಿಂದ ಮೈದಾನ ಅಪವಿತ್ರಗೊಂಡಿದೆ ಎಂಬಂತೆ ಬಿಂಬಿಸಿ ಅಪಮಾನ ಮಾಡುವ ಉದ್ದೇಶದಿಂದಲೇ ಈ ಶುದ್ಧೀಕರಣ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯವನ್ನು ಉತ್ತರಾಖಂಡ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.



