ಬಾಗಲಕೋಟೆ: ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ಭಾನುವಾರ ರಾತ್ರಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ವೇದಿಕೆಯ ಮೇಲೆ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ವಾಗ್ವಾದ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಉತ್ಸವ ವೀಕ್ಷಿಸಲು ನೂರಾರು ಮಂದಿ ಸೇರಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ. ಪೊಲೀಸರ ಸಮಯೋಚಿತ ಕ್ರಮದಿಂದ ಯಾವುದೇ ಭಾರಿ ಅಹಿತಕರ ಘಟನೆ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.



