ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆ ಹಾಗೂ 11 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, 6 ವರ್ಷದ ಸಾನ್ವಿಕಾ ಮತ್ತು 4 ವರ್ಷದ ತನ್ವಿಕಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಇಬ್ಬರು ಬಾಲಕಿಯರಿಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸೂರು ಗ್ರಾಮದ ಭವಾನಿ ಸೋಮವಾರ ಮಧ್ಯಾಹ್ನ ಬಸ್ ಮೂಲಕ ಶಿವಮೊಗ್ಗ ನಗರಕ್ಕೆ ಬಂದಿದ್ದರು. ಬಳಿಕ ಚಿಕ್ಕಲ್ ರಸ್ತೆಯ ಶ್ರೀ ಅರಕೇಶ್ವರ ದೇವಸ್ಥಾನದ ಬಳಿ ತೆರಳಿದ್ದಾರೆ ಎನ್ನಲಾಗಿದೆ.
ಸೋಮವಾರ ಸಂಜೆ ಸುಮಾರು 7.30ರ ವೇಳೆಗೆ ರೈಲ್ವೆ ಸೇತುವೆ ಸಮೀಪದ ತುಂಗಾ ನದಿಗೆ ಮಹಿಳೆ ಮಕ್ಕಳೊಂದಿಗೆ ತೆರಳಿದ್ದಾರೆ. ಪೊಲೀಸರ ಪ್ರಕಾರ, ಮೊದಲು ಇಬ್ಬರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ, ಬಳಿಕ ತಮ್ಮ 11 ತಿಂಗಳ ಮಗನೊಂದಿಗೆ ನದಿಗೆ ಹಾರಿದ್ದಾರೆ.
ಮಹಿಳೆ ಹಾಗೂ ಮಗ ನದಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊರತೆಗೆದಿದ್ದಾರೆ. ಬಳಿಕ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ.
ಇತ್ತ ನಾಪತ್ತೆಯಾಗಿರುವ ಸಾನ್ವಿಕಾ ಮತ್ತು ತನ್ವಿಕಾ ಅವರಿಗಾಗಿ ಮಂಗಳವಾರ ಬೆಳಗ್ಗೆಯಿಂದಲೇ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ ಕೌಟುಂಬಿಕ ಕಲಹ ಎನ್ನಲಾಗಿದ್ದು, ಮಹಿಳೆ ಈ ನಿರ್ಧಾರ ಕೈಗೊಳ್ಳಲು ಕಾರಣವಾದ ನಿಖರ ಸಂಗತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಇಬ್ಬರು ಮಕ್ಕಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.



