ಬೆಂಗಳೂರು: ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ಭತ್ತ ಖರೀದಿಸಿ, ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿದ ಬಳಿಕ ಭಾರತೀಯ ಆಹಾರ ನಿಗಮದ ಮೂಲಕ ಎಥೆನಾಲ್ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ.40ರಷ್ಟು ಕಡಿಮೆ ದರದಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾರತದ ಎಥೆನಾಲ್ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಆಹಾರ ಭದ್ರತೆಗಾಗಿ ಸರ್ಕಾರ ರೈತರಿಂದ ಭತ್ತ ಖರೀದಿಸುತ್ತದೆ, ಇದಕ್ಕೆ ತೆರಿಗೆದಾರರ ಹಣ ಬಳಕೆಯಾಗುತ್ತದೆ ಎಂದ ಅವರು, ಖರೀದಿಸಿದ ಧಾನ್ಯದ ಸಂಗ್ರಹಣೆ ಮತ್ತು ಸಾಗಣೆಯಿಂದ ಸರ್ಕಾರದ ಮೇಲೆ ಮತ್ತಷ್ಟು ವೆಚ್ಚದ ಹೊರೆ ಬೀಳುತ್ತದೆ ಎಂದು ವಿವರಿಸಿದ್ದಾರೆ. ಇಷ್ಟೆಲ್ಲ ವೆಚ್ಚದ ಬಳಿಕ ಅದೇ ಅಕ್ಕಿಯನ್ನು ಎಥೆನಾಲ್ ಉತ್ಪಾದಕರಿಗೆ ಶೇ.40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಪ್ರಶ್ನಿಸಿದ್ದಾರೆ.
ಖರೀದಿ, ಸಂಗ್ರಹಣೆ, ಸಾಗಣೆಗೆ ಸರ್ಕಾರ ವೆಚ್ಚ ಮಾಡಿ, ಬಳಿಕ ಅದೇ ಧಾನ್ಯವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಈ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ತುರ್ತಾಗಿ ಸೃಷ್ಟಿಸಲಾದ ಎಥೆನಾಲ್ ಉತ್ಪಾದನಾ ಸಾಮರ್ಥ್ಯಕ್ಕೆ ಕಚ್ಚಾ ವಸ್ತು ಒದಗಿಸುವ ಉದ್ದೇಶದಿಂದ ಆಹಾರ ಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಸರ್ಕಾರವೇ ಎಥೆನಾಲ್ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಧಾನ್ಯವನ್ನು ಕಡಿಮೆ ದರದಲ್ಲಿ ನೀಡಿ ಬಳಿಕ ಅದೇ ಉದ್ಯಮದಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸುವುದರಿಂದ ಸಾಮಾನ್ಯ ಗ್ರಾಹಕನಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ.



