ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ: ಚಿಟ್ ಫಂಡ್ ವ್ಯವಹಾರದ ಬಗ್ಗೆ ಹಲವು ಅನುಮಾನಗಳಿರುವ ಇಂದಿನ ಕಾಲಘಟ್ಟದಲ್ಲಿಯೂ ೧೮ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿ ರಾಜ್ಯದ ವಿವಿಧೆಡೆ ೨೦ ಶಾಖೆಗಳನ್ನು ವಿಸ್ತರಿಸಿರುವುದು ಶಿವಸಂಗಮ ಸಂಸ್ಥೆಯ ಪಾರದರ್ಶಕ ಹಾಗೂ ವಿಶ್ವಾಸಾರ್ಹ ವ್ಯವಹಾರಕ್ಕೆ ಸಾಕ್ಷಿಯಾಗಿದೆ ಎಂದು ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಪೂಜ್ಯ ಜ.ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಗದಗದ ಪ್ರತಿಷ್ಠಿತ ಶಿವಸಂಗಮ ಸಮೂಹ ಸಂಸ್ಥೆಯ ಶಿವಸಂಗಮ ಚಿಟ್ಸ್ (ಪ್ರೈ.) ಲಿಮಿಟೆಡ್‌ನ ೨೦ನೇ ಶಾಖೆಯನ್ನು ಶಿವಮೊಗ್ಗದ ತಿಲಕನಗರದ ನೂತನ ಕಚೇರಿಯಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಿಟ್ ಫಂಡ್ ವ್ಯವಹಾರದ ಬಗ್ಗೆ ಜನರಲ್ಲಿ ಸಾಮಾನ್ಯವಾಗಿ ಅನುಮಾನಗಳಿದ್ದರೂ, ೧೮ ವರ್ಷಗಳ ಸುದೀರ್ಘ ಪಯಣದಲ್ಲಿ ೨೦ ಶಾಖೆಗಳನ್ನು ಸ್ಥಾಪಿಸಿರುವುದು ಗ್ರಾಹಕರು ಸಂಸ್ಥೆಯ ಮೇಲೆ ಹೊಂದಿರುವ ಅಪಾರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಸಂಸ್ಥೆ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯು ಕೇವಲ ಹಣಕಾಸು ವ್ಯವಹಾರಕ್ಕೆ ಸೀಮಿತವಾಗದೆ ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣೆ, ಕ್ಯಾನ್ಸರ್ ರೋಗಿಗಳಿಗೆ ಉಚಿತ ತಪಾಸಣೆ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಶುದ್ಧ ಕುಡಿಯುವ ನೀರು, ಆಹಾರ ಪದಾರ್ಥಗಳು ಹಾಗೂ ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಸಂಸ್ಥೆ ತನ್ನ ಚಟುವಟಿಕೆ ವಿಸ್ತರಿಸಿದೆ ಎಂದು ಹೇಳಿದರು.
ಶಿವಮೊಗ್ಗ ಬಸವಕೇಂದ್ರದ ಪೂಜ್ಯ ಡಾ. ಬಸವ ಮರುಳಸಿದ್ಧ ಮಹಾಸ್ವಾಮಿಗಳು ಸಂಸ್ಥೆಯ ಪ್ರಗತಿಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಯುವರಾಜ ಕೆ., ಗಣ್ಯ ವ್ಯಾಪಾರಿ ದೇವೇಂದ್ರಪ್ಪ, ಹೊಯ್ಸಳ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಂಕರರಾವ್ ಹಾಗೂ ಪೂರ್ಣಪ್ರಜ್ಞ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ವರ ಕೆ. ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಿವಸಂಗಮ ಸಮೂಹ ಸಂಸ್ಥೆಯ ಸಂಸ್ಥಾಪಕ ಜಿ.ಎಂ. ಪಲ್ಲೇದ, ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಿರ್ದೇಶಕರು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಸಂಗಮ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್. ಶಿವಕಾಳಿಮಠ, ಉಪಾಧ್ಯಕ್ಷ ಎಂ.ಜಿ. ಗಾಣಿಗೇರ, ನಿರ್ದೇಶಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೋಟ್
೧೮ ವರ್ಷಗಳ ಕಾಲ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ೨೦ ಶಾಖೆಗಳಿಗೆ ವಿಸ್ತರಿಸಿರುವುದು ಸಣ್ಣ ಸಾಧನೆಯಲ್ಲ. ಪಾರದರ್ಶಕ ವ್ಯವಹಾರ ಮತ್ತು ಜನರ ನಂಬಿಕೆಯೇ ಶಿವಸಂಗಮ ಸಂಸ್ಥೆಯ ನಿಜವಾದ ಶಕ್ತಿಯಾಗಿದೆ.
– ಜ.ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು



