ನವದೆಹಲಿ: ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾ ಅವರನ್ನು ರಾಜಸ್ಥಾನದ ಭಿವಡಿಯಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.**
ಕಟ್ಟಡ ಕುಸಿತದ ಬಳಿಕ ಹರಿರಾಮ್ ಗುಪ್ತಾ ಹಾಗೂ ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನರಹತ್ಯೆಗೆ ಸಮಾನವಾದ ಅಪರಾಧ, ಕಟ್ಟಡ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳನ್ನು ಪ್ರಕರಣದಲ್ಲಿ ದಾಖಲಿಸಲಾಗಿದೆ.
ಮಾಲೀಕನ ಪತ್ತೆಗಾಗಿ ದೆಹಲಿ ಪೊಲೀಸರು 10 ತಂಡಗಳನ್ನು ರಚಿಸಿದ್ದರು. ಸ್ಥಳೀಯ ಜಿಲ್ಲಾ ಪೊಲೀಸರು, ವಿಶೇಷ ಸಿಬ್ಬಂದಿ ಹಾಗೂ ಇತರ ಕಾರ್ಯಾಚರಣಾ ಘಟಕಗಳ ಸಿಬ್ಬಂದಿ ಈ ತಂಡಗಳಲ್ಲಿದ್ದರು. ಪ್ರತಿ ತಂಡಕ್ಕೂ ಹೆಚ್ಚುವರಿ ಡಿಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ನೇತೃತ್ವ ವಹಿಸಿದ್ದರು. ಹರಿರಾಮ್ ಗುಪ್ತಾ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಕೂಡ ಹೊರಡಿಸಲಾಗಿತ್ತು.
ಐವರು ಅಧಿಕಾರಿಗಳ ಅಮಾನತು
ಕಟ್ಟಡ ಕುಸಿತದ ಹಿನ್ನೆಲೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ದಕ್ಷಿಣ ವಲಯದ ಉಪ ಆಯುಕ್ತ ರಾಕೇಶ್ ಕುಮಾರ್ ಸೇರಿದಂತೆ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ದಕ್ಷಿಣ ವಲಯದ ಅಧೀಕ್ಷಕ ಎಂಜಿನಿಯರ್ ರಣವೀರ್ ಸಿಂಗ್, ಕಾರ್ಯನಿರ್ವಾಹಕ ಎಂಜಿನಿಯರ್ (ಕಟ್ಟಡ) ಲಲಿತ್ ಕುಮಾರ್ ಗೋಯಲ್, ಸಹಾಯಕ ಎಂಜಿನಿಯರ್ (ಕಟ್ಟಡ) ಸುನೀಲ್ ಚೌಹಾಣ್ ಹಾಗೂ ಕಿರಿಯ ಎಂಜಿನಿಯರ್ (ಕಟ್ಟಡ) ಆಶಿಶ್ ಕುಮಾರ್ ಸೇರಿದ್ದಾರೆ.
1959ರ ಡಿಎಂಸಿ ಸೇವೆಗಳ (ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳ ಅಡಿಯಲ್ಲಿ, ಆಯುಕ್ತರ ನಿರ್ದೇಶನದ ಮೇರೆಗೆ ಜಾಗೃತ ವಿಭಾಗ ಅಮಾನತು ಆದೇಶ ಹೊರಡಿಸಿದೆ. ನಿಯಮ 5(2)ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ನಿಯಮಗಳ ಪ್ರಕಾರ ಅಮಾನತುಗೊಂಡ ಅಧಿಕಾರಿಗಳಿಗೆ ಜೀವನ ನಿರ್ವಹಣಾ ಭತ್ಯೆ ದೊರೆಯಲಿದೆ.
ಇತ್ತ ಸೋಮವಾರ ರಕ್ಷಣಾ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು 12 ಮಂದಿಯನ್ನು ರಕ್ಷಿಸಲಾಗಿದೆ.
ಕಟ್ಟಡ ಕುಸಿತಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸಲಾಯಿತು.
ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಸಮೀಪದ ಈ ಕಟ್ಟಡ ಭಾನುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಕುಸಿದಿತ್ತು. ಆ ವೇಳೆ ನೆಲಮಹಡಿಯಲ್ಲಿ ದುರಸ್ತಿ ಹಾಗೂ ನವೀಕರಣ ಕಾಮಗಾರಿ ನಡೆಯುತ್ತಿತ್ತು ಎಂದು ವರದಿಯಾಗಿದೆ. ದಶಕಗಳಷ್ಟು ಹಳೆಯದಾದ ಐದು ಅಂತಸ್ತಿನ ಕಟ್ಟಡವನ್ನು ‘ಹಾಸ್ಟೆಲ್ ಡೇಜ್’ ಎಂದು ಸ್ಥಳೀಯವಾಗಿ ಕರೆಯಲಾಗುತ್ತಿದ್ದು, ಬಾಲಕರ ಪಿಜಿಯಾಗಿ ಬಳಸಲಾಗುತ್ತಿತ್ತು.



