ಉಡುಪಿ: ಕೊಲ್ಲೂರು ದೇವಿಯ ದರ್ಶನ ಪಡೆದು ಕೊಡಚಾದ್ರಿಗೆ ತೆರಳಿದ್ದ ಕೇರಳ ಮೂಲದ ಪ್ರವಾಸಿಗರಿಗೆ ವಾಪಸ್ ಬರುವ ವೇಳೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನ ಮತ್ತು ಪ್ರವಾಸಿಗರ ಜೀಪ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಕೊಡಚಾದ್ರಿಯ ದಳಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ಪ್ರವಾಸಿಗರು ವಾಪಾಸ್ ಬರುತ್ತಿದ್ದ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾಗಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರ, ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕೇರಳ ಮೂಲದ ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



