ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತಿಂಗಳುಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ಬದ್ರುದ್ದೀನ್ ಮಠ ಅವರು ಚಿಕಿತ್ಸೆ ಫಲಿಸದೆ ಜೂನ್ 14ರಂದು ನಿಧನರಾಗಿದ್ದಾರೆ.
ಮೂಲತಃ ಮಠ ನಿವಾಸಿಯಾಗಿದ್ದ ಬದ್ರುದ್ದೀನ್, ಪ್ರಸ್ತುತ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೂಟೇಲ್ ಹೋಟೆಲ್‌ನಲ್ಲಿ ಉದ್ಯೋಗದಲ್ಲಿದ್ದ ಅವರು 2025ರ ಡಿಸೆಂಬರ್ 11ರ ರಾತ್ರಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಅವರ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡೆದಿತ್ತು.
ಘಟನೆಯ ನಂತರ ಗಂಭೀರವಾಗಿ ಗಾಯಗೊಂಡ ಅವರನ್ನು ಪುತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಅವರು ಕೋಮಾ ಸ್ಥಿತಿಗೆ ಜಾರಿದ್ದರು.
ದೀರ್ಘಕಾಲ ಆಸ್ಪತ್ರೆ ಮತ್ತು ನಂತರ ಮನೆಯಲ್ಲಿನ ಆರೈಕೆಯಲ್ಲಿದ್ದ ಅವರು ಅಂತಿಮವಾಗಿ ಜೂನ್ 14ರಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ನಂತರ ಅವರ ಅಂತ್ಯಸಂಸ್ಕಾರವನ್ನು ಮಠದ ಬದ್ರಿಯ ಜುಮಾ ಮಸೀದಿಯಲ್ಲಿ ನಡೆಸಲಾಗಿದೆ.



