ವಾಷಿಂಗ್ಟನ್: ಅಮೆರಿಕದ ಮಿಸೌರಿ ರಾಜ್ಯದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 11 ಸ್ಕೈಡೈವರ್‌ಗಳು ಮತ್ತು 1 ಪೈಲಟ್ ಸೇರಿ ಒಟ್ಟು 12 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಸ್ಕೈಡೈವಿಂಗ್ ಚಟುವಟಿಕೆಗಾಗಿ ಗುತ್ತಿಗೆ ಪಡೆದಿದ್ದ ವಿಮಾನವು ಭಾನುವಾರ ಸ್ಥಳೀಯ ಸಮಯ 11:20ರ ಸುಮಾರಿಗೆ ಟೇಕ್‌ಆಫ್ ಆಗಿತ್ತು.
ಹಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ವಿಮಾನವು ತೀಕ್ಷ್ಣ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ ಸುಮಾರು 200 ಗಜ ದೂರದಲ್ಲಿ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಟ್ಸ್ ಕೌಂಟಿ ತುರ್ತು ನಿರ್ವಹಣಾ ವಕ್ತಾರರ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ತೀವ್ರ ಪರಿಶೀಲನೆ ನಡೆಯುತ್ತಿದೆ.
ಅಮೆರಿಕದ ಫೆಡರಲ್ ಏವಿಯೇಷನ್ ಆಡಳಿತ (FAA) ಮಾಹಿತಿ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಪೆಸಿಫಿಕ್ ಏರೋಸ್ಪೇಸ್ P-750 ಆಗಿದ್ದು, ವಾಣಿಜ್ಯ ಪ್ರಯಾಣಿಕ ವಿಮಾನವಲ್ಲ, ಸ್ಥಳೀಯ ಸ್ಕೈಡೈವಿಂಗ್ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು.
ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



