ಬೆಂಗಳೂರು: ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ ಅವರು ಇಂದು ನಿಧನರಾಗಿದ್ದಾರೆ.
ಅವರ ನಿಧನದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇಂದಿರಾ ಲಂಕೇಶ್ ಅವರು ಸ್ವತಃ ಲೇಖಕಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಪತಿ ಪಿ. ಲಂಕೇಶ್ ಅವರ ಸಾಹಿತ್ಯಕ ಬದುಕಿಗೆ ಸದಾ ಬೆಂಬಲವಾಗಿ ನಿಂತಿದ್ದ ಅವರು, ಆರ್ಥಿಕ ಸಂಕಷ್ಟದ ಸಮಯದಲ್ಲೂ ಕುಟುಂಬವನ್ನು ಮುನ್ನಡೆಸಿದ ದಿಟ್ಟ ಮಹಿಳೆಯಾಗಿದ್ದರು. ಯಾವುದೇ ಅನುಭವವಿಲ್ಲದಿದ್ದರೂ ಸೀರೆ ಅಂಗಡಿ ಆರಂಭಿಸಿ ಕುಟುಂಬದ ಹೊಣೆ ಹೊತ್ತಿದ್ದರು.
ಅವರು ಬರೆದಿರುವ ‘ಹುಳಿಮಾವು ಮತ್ತು ನಾನು’ ಎಂಬ ಆತ್ಮಕಥನಾತ್ಮಕ ಕಾದಂಬರಿಯಲ್ಲಿ ತಮ್ಮ ಜೀವನದ ಅನುಭವಗಳು ಹಾಗೂ ಪಿ. ಲಂಕೇಶ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದರು.
ಈ ದಂಪತಿಗೆ ಮೂವರು ಮಕ್ಕಳು ಇದ್ದು, ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯ, ರಾಜಕೀಯ ಹಾಗೂ ಚಲನಚಿತ್ರ ಕ್ಷೇತ್ರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.



