ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮ ನಡುವೆ ಪ್ರೀತಿ ಬೆಳೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದ ಬೆನ್ನಲ್ಲೇ, ಇದೀಗ ಈ ವದಂತಿಗೆ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಸ್ಪಷ್ಟನೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ವಿಐಪಿ ಸ್ಟ್ಯಾಂಡ್ನಲ್ಲಿ ಶ್ರೀಲೀಲಾ ತಾಯಿ ಕಾಣಿಸಿಕೊಂಡಿದ್ದು, ಜೊತೆಗೆ ತಿಲಕ್ ಹೆಸರಿನ ಜರ್ಸಿ ವಿಚಾರದಿಂದ ನೆಟ್ಟಿಗರು ಇಬ್ಬರ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹರಿಬಿಟ್ಟಿದ್ದರು.
ಆದರೆ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿರುವ ಡಾ. ಸ್ವರ್ಣಲತಾ, “ಇದರಲ್ಲಿ ಯಾವುದೇ ಸತ್ಯವಿಲ್ಲ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯಾಗಿಲ್ಲ, ಮಾತನಾಡಿಲ್ಲ ಕೂಡ. ಇದು ಕೇವಲ ಸೋಶಿಯಲ್ ಮೀಡಿಯಾ ಕಲ್ಪನೆ” ಎಂದು ಹೇಳಿದ್ದಾರೆ.
ಅವರು ಮುಂದುವರಿದು, “ಶ್ರೀಲೀಲಾ ಈಗ ಸಿನಿಮಾ ಮತ್ತು ಓದಿನ ನಡುವೆ ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಜೂನ್ನಲ್ಲಿ ನಡೆಯುವ ನೀಟ್ ಪಿಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಸದ್ಯ ಅವಳ ಗಮನ ಸಂಪೂರ್ಣ ಕರಿಯರ್ ಮೇಲಷ್ಟೇ ಇದೆ” ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಹೆಸರು ಕೇಳಿಬಂದಿತ್ತು. ಆದರೆ ಅದೂ ಗಾಸಿಪ್ ಮಾತ್ರವಾಗಿಯೇ ಉಳಿದಿತ್ತು.



