ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಮೇ 20ರಂದು ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ.
ಕರ್ತವ್ಯಕ್ಕೆ ಗೈರಾದರೆ ‘ನೋ ವರ್ಕ್, ನೋ ಪೇ’ ನಿಯಮ ಜಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಮುಷ್ಕರ ಅಥವಾ ಪ್ರತಿಭಟನೆಯಲ್ಲಿ ಭಾಗಿಯಾದರೆ ಸೇವಾ ನಿಯಮಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಯಾಗಿರುವ ಕಾರಣ, ಮೇ 20ರಂದು ಬಸ್ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು ಎಂದು ಸೂಚಿಸಲಾಗಿದೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ನೌಕರರಿಗೆ ರಜೆ ನೀಡುವುದಿಲ್ಲ ಎಂದೂ ತಿಳಿಸಿದ್ದಾರೆ.
ಮುಷ್ಕರದ ದಿನ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಿ ವೇತನ ಕಡಿತ ಮಾಡಲಾಗುವುದು. ಜೊತೆಗೆ ಗೈರಾಗುವ ನೌಕರರ ವಿರುದ್ಧ ಶಿಸ್ತು ಕ್ರಮವೂ ಜಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಎಚ್ಚರಿಸಿದೆ.



