ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ರಂದು ಮೂರು ವರ್ಷ ಪೂರ್ಣಗೊಳ್ಳಲಿದ್ದು, ಅದಕ್ಕೂ ನಾಲ್ಕು ದಿನಗಳ ಮುನ್ನವೇ ಸಿದ್ದರಾಮಯ್ಯ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಒಟ್ಟು 8 ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
1977ರಲ್ಲಿ ಮೈಸೂರು ತಾಲೂಕು ಬೋರ್ಡ್ ಚುನಾವಣೆಯ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ರಾಜಕೀಯ ಪಯಣದ 50ನೇ ವರ್ಷಕ್ಕೆ ಕಾಲಿಡುವ ಹಂತದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿರುವುದು ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿದು ಆಡಳಿತ ನಡೆಸಿದ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅಗ್ರಸ್ಥಾನಕ್ಕೇರಿದ್ದಾರೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಜನಪರ ಆಡಳಿತ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಅವರು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ.



