ಕಿನ್ಶಾಸಾ: ಆಫ್ರಿಕಾದ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಇದುವರೆಗೆ 88 ಮಂದಿ ಮೃತಪಟ್ಟಿದ್ದಾರೆ.
300ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಕಾಂಗೋದ ಪೂರ್ವ ಭಾಗದ ಇಟುರಿ ಪ್ರಾಂತ್ಯ ಎಬೋಲಾ ಸೋಂಕಿನ ಕೇಂದ್ರಬಿಂದುವಾಗಿದೆ. ಅಲ್ಲಿಗೆ ಭೇಟಿ ನೀಡಿದ್ದ ರಾಜಧಾನಿ ಕಿನ್ಶಾಸಾದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು ಇತರ ಪ್ರದೇಶಗಳಿಗೂ ಹರಡುವ ಆತಂಕ ಹೆಚ್ಚಾಗಿದೆ. ಉತ್ತರ ಕಿವು ಪ್ರಾಂತ್ಯದಲ್ಲಿಯೂ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಎಬೋಲಾ ವೈರಸ್ ಬುಂಡಿಬುಗ್ಯ ವೈರಸ್‌ನಿಂದ ಹರಡುತ್ತದೆ. ಮೊದಲು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್ ಬಳಿಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಗಂಟಲು ಕೆರೆತ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ರೋಗ ಗಂಭೀರ ಹಂತ ತಲುಪಿದರೆ ದೇಹದ ಒಳಭಾಗದಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ.
1976ರಲ್ಲಿ ಕಾಂಗೋದ ಎಬೋಲಾ ನದಿ ತೀರ ಪ್ರದೇಶದಲ್ಲಿ ಈ ವೈರಸ್ ಮೊದಲ ಬಾರಿ ಪತ್ತೆಯಾಗಿತ್ತು. ಕೋತಿ, ಗೊರಿಲ್ಲಾ, ಚಿಂಪಾಂಜಿ ಹಾಗೂ ಬಾವಲಿಗಳ ಮೂಲಕ ಈ ಸೋಂಕು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯ ರಕ್ತ, ಬೆವರು, ವಾಂತಿ, ಮೂತ್ರ ಹಾಗೂ ದೇಹದ ಇತರ ದ್ರವಾಂಶಗಳ ಸಂಪರ್ಕದಿಂದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿನಿಂದ ಮೃತಪಟ್ಟವರ ಮೃತದೇಹವೂ ಅಪಾಯಕಾರಿ ಆಗಿರುವುದರಿಂದ, ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಎಬೋಲಾ ಸೋಂಕು ತಗುಲಿದ 10 ಜನರಲ್ಲಿ 9 ಮಂದಿಯ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಈ ವೈರಸ್ ಅತ್ಯಂತ ಮಾರಕ ಎಂದು ಪರಿಗಣಿಸಲಾಗಿದೆ. ವೈರಸ್ ದೇಹ ಪ್ರವೇಶಿಸಿದ 2ರಿಂದ 21 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಮಧುಮೇಹ, ಮೂತ್ರಪಿಂಡ ಮತ್ತು ಪಿತ್ತಜನಕಾಂಗ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.



