HomeKarnataka Newsಹನೂರು ಶೂಟೌಟ್‌ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ನ್ಯಾಯಾಂಗ ತನಿಖೆ ಆಗಲಿ ಎಂದ ಆರ್. ಅಶೋಕ್

ಹನೂರು ಶೂಟೌಟ್‌ ಪ್ರಕರಣ: ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ನ್ಯಾಯಾಂಗ ತನಿಖೆ ಆಗಲಿ ಎಂದ ಆರ್. ಅಶೋಕ್

For Dai;y Updates Join Our whatsapp Group

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ಸರ್ಕಾರ ನೀಡುತ್ತಿರುವ ಮಾಹಿತಿ ಹಾಗೂ ವಿವಿಧ ಅಧಿಕಾರಿಗಳ ಹೇಳಿಕೆಗಳಲ್ಲಿ ವ್ಯತ್ಯಾಸವಿರುವುದರಿಂದ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯೇ ಸೂಕ್ತ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ಸರ್ಕಾರದ ಉತ್ತರಗಳು ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡಿದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ರೀತಿಯ ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗಳಲ್ಲೂ ಸ್ಪಷ್ಟತೆ ಇಲ್ಲ. ಹಾಗಾದರೆ ನಿಜ ಯಾವುದು, ಯಾರ ಮಾತನ್ನು ನಂಬಬೇಕು ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆ ಪ್ರಾಣಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಮೃತರ ಕುಟುಂಬಸ್ಥರು ಇದನ್ನು ನಕಲಿ ಎನ್‌ಕೌಂಟರ್ ಎಂದು ಆರೋಪಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಗುಂಡಿನ ದಾಳಿ ನಡೆಸಬೇಕಾದ ಪರಿಸ್ಥಿತಿ ಇದ್ದರೂ ಮೊದಲು ಕಾಲಿಗೆ ಗುಂಡು ಹಾರಿಸುವುದು ಸಾಮಾನ್ಯ ಕ್ರಮವಾಗಿರುತ್ತದೆ. ಆದರೆ ಎದೆಗೆ ಗುಂಡು ತಗುಲಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆ ಅಗತ್ಯ ಎಂದು ಅವರು ಒತ್ತಾಯಿಸಿದರು.

ಪ್ರಕರಣದ ಕುರಿತು ಎಸ್‌ಪಿ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ ಅಶೋಕ್, ಮಹಜರು ಪೂರ್ಣಗೊಳ್ಳುವ ಮೊದಲೇ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಇದಲ್ಲದೆ, ಮೂವರ ಹಿನ್ನೆಲೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಗುಂಡಿನ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಯೂ ಸದ್ಯ ಸಾರ್ವಜನಿಕರ ಮುಂದೆ ಕಾಣಿಸುತ್ತಿಲ್ಲ. ಅವರು ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಪ್ರಕ್ರಿಯೆಗೆ ಒಳಗಾಗಬೇಕಿತ್ತು ಎಂದು ಹೇಳಿದರು.

“ಮ್ಯಾಜಿಸ್ಟ್ರೇಟ್ ತನಿಖೆ ಸಾಲದು”:

ಮುಖ್ಯಮಂತ್ರಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿರುವುದು ಸಾಕಾಗುವುದಿಲ್ಲ. ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಸಿಬ್ಬಂದಿಯನ್ನು ಕರ್ತವ್ಯದಿಂದ ದೂರವಿಡಬೇಕು ಎಂದು ಅಶೋಕ್ ಆಗ್ರಹಿಸಿದರು.

ಮೂರು ಮಂದಿಯ ಮೇಲೆ ಗುಂಡು ಹಾರಿಸುವ ಅನಿವಾರ್ಯತೆ ನಿಜವಾಗಿಯೂ ಇತ್ತೇ? ಎಲ್ಲರ ಕೈಯಲ್ಲೂ ಆಯುಧ ಇತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕಿತ್ತು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನ್ಯಾಯ ದೊರಕುವ ಭರವಸೆ ನೀಡಬೇಕಿತ್ತು ಎಂದು ಅಶೋಕ್ ಟೀಕಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img