ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗುತ್ತಿರುವ ನಡುವೆಯೇ ದೇಶದ ಜನರಿಗೆ ಮತ್ತೆ ಇಂಧನ ದರ ಏರಿಕೆಯ ಶಾಕ್ ಎದುರಾಗಿದೆ.
ಮಂಗಳವಾರ ಬೆಳಿಗ್ಗೆ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸರಾಸರಿ 90 ಪೈಸೆ ಹೆಚ್ಚಿಸಿವೆ.
ಇದು ಒಂದು ವಾರದೊಳಗೆ ಎರಡನೇ ಬಾರಿ ಇಂಧನ ದರ ಏರಿಕೆಯಾಗಿದೆ. ಕಳೆದ ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ 3 ರೂ. ಹೆಚ್ಚಿಸಲಾಗಿತ್ತು. ಇದೀಗ ಕೇವಲ ಕೆಲವೇ ದಿನಗಳ ಅಂತರದಲ್ಲಿ ಮತ್ತೆ ದರ ಏರಿಕೆಯಾಗಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಭಾರೀ ಹೊರೆ ತಂದಿದೆ.
ಹಿಂದಿನ ಏರಿಕೆಯ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 94.77 ರೂ.ನಿಂದ 97.77 ರೂ.ಗೆ ಹಾಗೂ ಡೀಸೆಲ್ ದರ 87.67 ರೂ.ನಿಂದ 90.67 ರೂ.ಗೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಹೆಚ್ಚಳ ಮಾಡಿರುವುದರಿಂದ ದರಗಳು ಇನ್ನಷ್ಟು ಏರಿಕೆಯಾಗಿವೆ.
ಮಾರುಕಟ್ಟೆ ವಿಶ್ಲೇಷಕರು ಹಾಗೂ ಕೈಗಾರಿಕಾ ಮೂಲಗಳ ಪ್ರಕಾರ, ಜಾಗತಿಕ ರಾಜತಾಂತ್ರಿಕ ಮತ್ತು ಮಿಲಿಟರಿ ಬಿಕ್ಕಟ್ಟಿನ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಪೂರೈಕೆಗೆ ಅಡಚಣೆ ಉಂಟಾಗಿದ್ದು, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ದಾಟಿದೆ ಎನ್ನಲಾಗಿದೆ.
ಕಚ್ಚಾ ತೈಲದ ದರ ಏರಿಕೆಯಿಂದ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ. ಕಳೆದ ವಾರದ 3 ರೂ. ಏರಿಕೆಯಿಂದ ತೈಲ ಕಂಪನಿಗಳಿಗೆ ಆಗುತ್ತಿದ್ದ ಶೇ.25ರಷ್ಟು ನಷ್ಟ ತಗ್ಗಿತ್ತು ಎನ್ನಲಾಗಿದ್ದು, ಇದೀಗ ಮತ್ತೆ ದರ ಹೆಚ್ಚಳ ಮಾಡಲಾಗಿದೆ.
ಇಂಧನ ದರದ ನಿರಂತರ ಏರಿಕೆಯಿಂದ ಸಾರಿಗೆ ವೆಚ್ಚ, ಅಗತ್ಯ ವಸ್ತುಗಳ ಬೆಲೆ ಮತ್ತು ದೈನಂದಿನ ಜೀವನ ವೆಚ್ಚಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.



