HomeGadag Newsಮಳೆರಾಯನ ರೌದ್ರಾವತಾರಕ್ಕೆ ಬಿಚ್ಚಿಬಿದ್ದ ಗದಗ: ಭೀಕರ ಗಾಳಿಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು!

ಮಳೆರಾಯನ ರೌದ್ರಾವತಾರಕ್ಕೆ ಬಿಚ್ಚಿಬಿದ್ದ ಗದಗ: ಭೀಕರ ಗಾಳಿಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು!

Spread the love

ಗದಗ:- ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಮುಂದುವರಿದ ಮಳೆ ಹಾಗೂ ಭಾರೀ ಗಾಳಿಗೆ ಅನೇಕ ಕಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಯಿತು. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಕತ್ತಲಲ್ಲೇ ಪರದಾಡುವಂತಾಯಿತು.

ವೀರನಾರಾಯಣ ದೇವಸ್ಥಾನದ ಬಳಿ ಬೃಹತ್ ಮರವೊಂದು ಮನೆ ಮೇಲಕ್ಕೆ ಬಿದ್ದ ಪರಿಣಾಮ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮುಳಗುಂದ ನಾಕಾ ಬಳಿ ಗೂಡ್ಸ್ ವಾಹನದ ಮೇಲೆ ಮರ ಬಿದ್ದಿದ್ದು, ವಾಹನ ಜಖಂಗೊಂಡಿದೆ. ಇದರಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು ವಾಹನಗಳ ಸರದಿ ನಿರ್ಮಾಣವಾಯಿತು.

ಗದಗ ಡಿಪೋ ಮುಂಭಾಗದಲ್ಲಿಯೂ ಬೃಹತ್ ಮರ ಧರೆಗುರುಳಿದ ಪರಿಣಾಮ ಸಾರಿಗೆ ಬಸ್‌ಗಳು ಡಿಪೋದಿಂದ ಹೊರಬರಲಾಗದ ಸ್ಥಿತಿ ಉಂಟಾಯಿತು. ಬಳಿಕ ಜೆಸಿಬಿ ಹಾಗೂ ಕಟಿಂಗ್ ಯಂತ್ರಗಳ ಸಹಾಯದಿಂದ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು.

ನೆಲಕ್ಕುರುಳಿದ 100 ವರ್ಷದ ಬೇವಿನ ಮರ:-

ಬೆಟಗೇರಿಯ ಕಬಾಡಿ ರಸ್ತೆಯ ಜೋಡು ಬಸವೇಶ್ವರ ದೇವಸ್ಥಾನದ ಬಳಿ ಸುಮಾರು 100 ವರ್ಷದ ಬೇವಿನ ಮರ ವಿದ್ಯುತ್ ಕಂಬದೊಂದಿಗೆ ಬುಡಸಹಿತ ಉರುಳಿ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ತುಂಡಾಗಿ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಎರಡು ಕಾರುಗಳ ಮೇಲೂ ಮರ ಬಿದ್ದಿದ್ದು, ವಾಹನಗಳು ಜಖಂಗೊಂಡಿವೆ.

ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ!

ಎಸ್‌ಎಂ ಕೃಷ್ಣ ನಗರ, ಉಸಿಗಿನಗಟ್ಟಿ ಓಣಿ ಹಾಗೂ ಯಲಿಗಾರ ಪ್ಲಾಟ್ ಭಾಗಗಳಲ್ಲಿ ಭಾರೀ ಗಾಳಿಗೆ ಮನೆಗಳ ಚಾವಣಿಗಳು ಹಾರಿ ಹೋಗಿರುವ ಘಟನೆಗಳು ವರದಿಯಾಗಿವೆ. ನಿವಾಸಿಗಳು ಭೀತಿಯಿಂದ ಮನೆಗಳಿಂದ ಹೊರಬಂದ ದೃಶ್ಯಗಳು ಕಂಡುಬಂದವು.

ರಸ್ತೆ ಮೇಲೆ ತೇಲಿದ ಸಿಂಟ್ಯಾಕ್ಸ್ ಟ್ಯಾಂಕ್:-

ತಿಲಕ್ ಪಾರ್ಕ್ ಬಳಿ ಭಾರೀ ಮಳೆಯಿಂದ ಸಿಂಟ್ಯಾಕ್ಸ್ ನೀರಿನ ಟ್ಯಾಂಕ್ ರಸ್ತೆ ಮೇಲೆ ತೇಲಿದ ದೃಶ್ಯ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ:-

ಬೆಟಗೇರಿಯಲ್ಲಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಭಾರೀ ಸಿಡಿಲಿನ ಶಬ್ದಕ್ಕೆ ಜನರು ಆತಂಕಗೊಂಡರು.

ಒಟ್ಟಾರೆ ಗಾಳಿ-ಮಳೆಯ ಅಬ್ಬರಕ್ಕೆ ಗದಗ-ಬೆಟಗೇರಿ ನಗರ ತತ್ತರಿಸಿದ್ದು, ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ. ಆದರೆ ಆಸ್ತಿ ಹಾನಿ, ವಿದ್ಯುತ್ ವ್ಯತ್ಯಯ ಹಾಗೂ ಸಂಚಾರ ಅಸ್ತವ್ಯಸ್ತದಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!