ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಘೋಷಿಸಿರುವ ಮುಷ್ಕರದ ಡೆಡ್‌ಲೈನ್ ಇಂದು ಅಂತ್ಯಗೊಳ್ಳಲಿದ್ದು, ಸರ್ಕಾರ ಮತ್ತು ನೌಕರರ ನಡುವಿನ ಸಂಘರ್ಷ ತೀವ್ರ ಹಂತ ತಲುಪಿದೆ.
ಮೇ 18ರಂದು ಕಾರ್ಮಿಕ ಇಲಾಖೆಯ ಜೊತೆ ನಡೆದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ಇಂದು ಸರ್ಕಾರ ಮತ್ತೊಮ್ಮೆ ಮಾತುಕತೆ ನಡೆಸದಿದ್ದರೆ ರಾತ್ರಿಯಿಂದಲೇ ಸಾರಿಗೆ ಮುಷ್ಕರ ಆರಂಭವಾಗುವ ಸಾಧ್ಯತೆ ಇದೆ.
ಸಂಧಾನ ಸಭೆಯಲ್ಲಿ ಸರ್ಕಾರದ ಮನವೊಲಿಕೆ ಪ್ರಯತ್ನಗಳಿಗೆ ನೌಕರ ಸಂಘಟನೆ ಮುಖಂಡರು ಬಗ್ಗದ ಹಿನ್ನೆಲೆ, ಮುಷ್ಕರ ಅನಿವಾರ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಆದರೆ ನೌಕರರು ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದು, ವೇತನ ಹೆಚ್ಚಳದ ಪ್ರಮಾಣದ ವಿಚಾರದಲ್ಲಿ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ವೇತನ ಹೆಚ್ಚಳ ಜಾರಿಗೆ ಬರುವ ದಿನಾಂಕದಲ್ಲಿ ಯಾವುದೇ ಬದಲಾವಣೆ ಒಪ್ಪುವುದಿಲ್ಲ ಎಂಬ ಷರತ್ತಿನೊಂದಿಗೆ ನೌಕರರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈ ಪ್ರಸ್ತಾವನೆಗೆ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನೊಂದೆಡೆ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆಯೇ ಸಿಎಂ ಸ್ವತಃ ಸಭೆ ನಡೆಸಿ ನೌಕರರ ಮನವೊಲಿಸುತ್ತಾರಾ ಅಥವಾ ಜವಾಬ್ದಾರಿಯನ್ನು ಸಾರಿಗೆ ಸಚಿವರಿಗೇ ವಹಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಒಂದುವೇಳೆ ಮುಷ್ಕರ ಆರಂಭವಾದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಮಗಳು ಪ್ಲ್ಯಾನ್ ಬಿ ಸಿದ್ಧಪಡಿಸಿವೆ. ಟ್ರೈನಿ ಸಿಬ್ಬಂದಿ ಹಾಗೂ ಖಾಸಗಿ ಬಸ್‌ಗಳ ಸಹಾಯದಿಂದ ಸಾರಿಗೆ ಸೇವೆ ಮುಂದುವರಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರ ಮತ್ತು ನೌಕರರ ನಡುವಿನ ಇಂದಿನ ಬೆಳವಣಿಗೆ ರಾಜ್ಯದ ಲಕ್ಷಾಂತರ ಪ್ರಯಾಣಿಕರ ಗಮನ ಸೆಳೆದಿದ್ದು, ಮಾತುಕತೆ ಯಶಸ್ವಿಯಾಗುತ್ತದೆಯೋ ಅಥವಾ ಮುಷ್ಕರ ಅನಿವಾರ್ಯವಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.



