ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರಿಕೆಯಾಗುತ್ತಿದೆ.
ಪಶ್ಚಿಮ ಏಷ್ಯಾದಲ್ಲಿನ ಸಮರ ಪರಿಸ್ಥಿತಿ ಮತ್ತು ಇಂಧನ ಬಿಕ್ಕಟ್ಟಿನ ಪರಿಣಾಮವಾಗಿ ಇಂಧನ ದರಗಳು ಹೆಚ್ಚಳ ಕಂಡಿದ್ದು, ವಾಹನ ಸವಾರರ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 90 ಪೈಸೆ ಏರಿಕೆಯಾದ ಹಿನ್ನೆಲೆ ಜನರು ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.
ಈ ನಡುವೆ ಬೆಂಗಳೂರಿನ ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳ ಇವಿ ಬೈಕ್ ಶೋರೂಂಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರು ಎಲೆಕ್ಟ್ರಿಕ್ ಬೈಕ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು, ಹಲವರು ನೇರವಾಗಿ ಬುಕ್ಕಿಂಗ್ ಕೂಡ ಮಾಡುತ್ತಿದ್ದಾರೆ.
ಪರಿಸರ ಸ್ನೇಹಿ ತಂತ್ರಜ್ಞಾನ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಉಳಿಯುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಮೂಲದ ಹಲವು ಸ್ಟಾರ್ಟ್‌ಅಪ್ ಹಾಗೂ ಉದ್ಯಮಿಗಳು ಹೊಸ ಮಾದರಿಯ ಇವಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಡಿಮೆ ಬಜೆಟ್‌ನಲ್ಲಿ ಆಧುನಿಕ ಫೀಚರ್ಸ್‌ಗಳೊಂದಿಗೆ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಪೆಟ್ರೋಲ್ ದರ ಏರಿಕೆಯು ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಹನ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



