ತುಮಕೂರು: ಇಂದಿನ ಬೆಲೆ ಏರಿಕೆ ಹಾಗೂ ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಅಂಗವಾಗಿ ತುಮಕೂರಿನಲ್ಲಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಆರ್ಥಿಕ ಹಾಗೂ ಶಿಕ್ಷಣ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.
ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದಾಗ ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದರು. ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇರಾನ್ ಮೇಲೆ ಯುದ್ಧವೂ ನಡೆಯಿತು. ಆದರೆ ಇರಾನ್ ಮೇಲೆ ದಾಳಿ ನಡೆದಾಗ ಮೋದಿ ಒಮ್ಮೆಯೂ ವಿಷಾದ ವ್ಯಕ್ತಪಡಿಸಲಿಲ್ಲ ಎಂದು ಹೇಳಿದರು.
ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆಯಿಂದ ಇಂಧನ ದರ ಏರಿಕೆ ಉಂಟಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಈ ಸ್ಥಿತಿಗೂ ಪ್ರಧಾನಿ ಮೋದಿ ಅವರೇ ನೇರ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದೇ ವೇಳೆ ಉದ್ಯಮಿಗಳಾದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಮೋದಿ ಪ್ರಧಾನಿಯಾದ ಬಳಿಕ ಲಾಭ ಪಡೆದವರು ಅಂಬಾನಿ ಮತ್ತು ಅದಾನಿ ಮಾತ್ರ ಎಂದು ಟೀಕಿಸಿದರು.
2014ರಲ್ಲಿ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ ಸುಮಾರು 16 ಸಾವಿರ ಕೋಟಿ ರೂಪಾಯಿ ಇತ್ತು. ಇಂದು ಅದು ಲಕ್ಷಾಂತರ ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಮುಕೇಶ್ ಅಂಬಾನಿಯವರ ಆರ್ಥಿಕ ಸ್ಥಿತಿಯೂ ಬಹಳಷ್ಟು ವೃದ್ಧಿಯಾಗಿದೆ.
ಆದರೆ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದ ನೀತಿಗಳಿಂದ ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.



