ಕೋಲಾರ: ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಪುಲ್ ಷಾ ಮೊಹಲ್ಲಾದಲ್ಲಿ ನಡೆದಿದೆ.
ತಿಥಿ ಕಾರ್ಯಕ್ಕಾಗಿ ಹಾಕಲಾಗಿದ್ದ ಪೆಂಡಾಲ್ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ಮಕ್ಕಳು ಅದರ ಸಂಪರ್ಕಕ್ಕೆ ಬಂದಿದ್ದಾರೆ. ಪರಿಣಾಮ ಸಯ್ಯದ್ ರೆಹಮಾನ್ (4) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನೂ ಮೂವರು ಮಕ್ಕಳು ವಿದ್ಯುತ್ ಶಾಕ್ಗೆ ಒಳಗಾಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಅವರನ್ನು ರಕ್ಷಿಸಲಾಗಿದೆ. ಗಾಯಗೊಂಡ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಪೋಷಕರು ಆರೋಪಿಸಿದ್ದಾರೆ. ‘ಈ ಹಿಂದೆ ಕೂಡ ವಿದ್ಯುತ್ ತಂತಿಗಳು ಕೆಳಗೆ ಬೀಳುತ್ತಿರುವ ಬಗ್ಗೆ ದೂರು ನೀಡಿದ್ದೇವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



