ಕೊಡಗು: ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ದಾರುಣ ಘಟನೆಯ ಬಳಿಕ, ದಸರಾ ಮಹೋತ್ಸವದಿಂದ ಕಂಜನ್ ಆನೆಯನ್ನು ಹೊರಗಿಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿದ ಕಂಜನ್ ಆನೆಯನ್ನು ಇನ್ನು ಮುಂದೆ ದಸರಾ ಜಂಬೂಸವಾರಿಯಲ್ಲಿ ಬಳಸಬಾರದು ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಜನ್ ಆನೆಗೆ ದಸರಾದಿಂದ ‘ಕೋಕ್’ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ದುರ್ಘಟನೆ ರಾಜ್ಯಾದ್ಯಂತ ಶೋಕಕ್ಕೆ ಕಾರಣವಾಗಿದೆ. ಜೊತೆಗೆ ಈ ಘಟನೆಯ ಸಮಯದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಕೂಡ ಮೃತಪಟ್ಟಿರುವುದು ಘಟನೆ ಗಂಭೀರತೆಯನ್ನು ಹೆಚ್ಚಿಸಿದೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಕಂಜನ್ ಆನೆಯ ಭವಿಷ್ಯದ ಭಾಗವಹಿಸುವಿಕೆಯನ್ನು ರದ್ದುಪಡಿಸಲಾಗಿದೆ. ಆನೆಯ ವರ್ತನೆ ಮತ್ತು ಸುರಕ್ಷತಾ ಕಾರಣಗಳನ್ನು ಗಮನದಲ್ಲಿಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.



