ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಬಳಿಯ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಪೊಲೀಸ್ ಭದ್ರತೆಯ ನಡುವೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರ ವಶದಲ್ಲಿದ್ದ ಕೋಣೆಗಳನ್ನು ವಶಕ್ಕೆ ಪಡೆದು ಬೀಗ ಹಾಕಿದ್ದಾರೆ. ಸರ್ವೆ ಸಂಖ್ಯೆ 35 ಹಾಗೂ 37ರಲ್ಲಿ ಇರುವ 2 ಎಕರೆ 33 ಗುಂಟೆ ಜಾಗದ ವಿಚಾರವಾಗಿ ಮಂತ್ರಾಲಯ ರಾಯರ ಮಠ, ಅರ್ಚಕರು ಹಾಗೂ ರೈತರ ನಡುವೆ ಹಲವು ದಿನಗಳಿಂದ ವಿವಾದ ಮುಂದುವರಿದಿತ್ತು.
ಈ ಜಾಗವನ್ನು ಸರ್ಕಾರ ಮಂತ್ರಾಲಯ ರಾಯರ ಮಠಕ್ಕೆ ಮಂಜೂರು ಮಾಡಿದ್ದು, ಇದನ್ನು ಪ್ರಶ್ನಿಸಿ ಜಪದ ಕಟ್ಟೆ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.
ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಇದೇ ಏಪ್ರಿಲ್ 13ರಂದು ಸ್ಥಳದ ಸರ್ವೆ ಕಾರ್ಯ ನಡೆಸಿದ್ದರು. ಯಾವುದೇ ಮುನ್ಸೂಚನೆ ನೀಡದೆ ಸರ್ವೆ ಮಾಡಲಾಗಿದೆ ಎಂದು ಉಳುಮೆ ಮಾಡುತ್ತಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಏಕಾಏಕಿ ಕೋಣೆಗಳಿಗೆ ಬೀಗ ಹಾಕಿರುವುದಕ್ಕೆ ಅರ್ಚಕರ ಕುಟುಂಬಸ್ಥರು ಕೂಡ ಆಕ್ರೋಶ ಹೊರಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಜಾಗದ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹಾಗೂ ತಹಶೀಲ್ದಾರ್ ಸುರೇಶ್ ವರ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಸ್ತಿಯನ್ನು ಮಂತ್ರಾಲಯ ಮಠದ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.



