ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 25ನೇ ಅವಧಿಯ ಮಹಾಪೌರರಾಗಿ 69ನೇ ವಾರ್ಡ್ ಸದಸ್ಯೆ ದುರ್ಗಮ್ಮ ಶಶಿಕಾಂತ ಬಿಜವಾಡ ಹಾಗೂ ಉಪಮಹಾಪೌರರಾಗಿ 9ನೇ ವಾರ್ಡ್ ಸದಸ್ಯೆ ನಾಝರೆ ರತ್ನಾಬಾಯಿ ಏಕನಾಥ ಆಯ್ಕೆಯಾಗಿದ್ದಾರೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾ ಅಧ್ಯಕ್ಷಾಧಿಕಾರಿಯಾಗಿದ್ದ ಕೆ.ಎಂ. ಜಾನಕಿ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು.
ಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದುರ್ಗಮ್ಮ ಬಿಜವಾಡ ಅವರು 50 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಪ್ರತಿಸ್ಪರ್ಧಿ 20ನೇ ವಾರ್ಡ್ ಸದಸ್ಯೆ ಕವಿತಾ ದಾನಪ್ಪ ಕಬ್ಬೇರ ಅವರು 35 ಮತಗಳನ್ನು ಪಡೆದರು.
ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಝರೆ ರತ್ನಾಬಾಯಿ ಏಕನಾಥ ಅವರು 50 ಮತಗಳನ್ನು ಪಡೆದು ಆಯ್ಕೆಯಾದರು. ಅವರ ವಿರುದ್ಧ ಸ್ಪರ್ಧಿಸಿದ್ದ 6ನೇ ವಾರ್ಡ್ ಸದಸ್ಯೆ ದಿಲಷಾದ್ ಬೇಗಂ ನದಾಫ್ 35 ಮತಗಳನ್ನು ಹಾಗೂ 76ನೇ ವಾರ್ಡ್ ಸದಸ್ಯೆ ವಹೀದಾ ಖಾನಂ ಅಲಾಭಕ್ಷ ಕಿತ್ತೂರು 3 ಮತಗಳನ್ನು ಪಡೆದರು.
ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣೆಗೆ ಮಹಾನಗರ ಪಾಲಿಕೆ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 92 ಮತದಾರರು ಇದ್ದು, ಅವರಲ್ಲಿ 88 ಮಂದಿ ಮತದಾನದಲ್ಲಿ ಪಾಲ್ಗೊಂಡರು. ನಾಲ್ವರು ಸದಸ್ಯರು ಗೈರುಹಾಜರಾಗಿದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಗಾಳಿ ಉಪಸ್ಥಿತರಿದ್ದರು.



